ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿಯಿಡಿ ಸುರಿಯುವ ಮಳೆಯಿಂದಾಗಿ ಬೆಂಗಳೂರು ರಸ್ತೆಗಳು ನದಿಯಂತಾಗಿದ್ದು, ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಅವಾಂತರದಿಂದ ಹಲವೆಡೆ ರಸ್ತೆಗಳು, ಅಂಡರ್ ಪಾಸ್ ಗಳಲ್ಲಿ ನೀರು ನಿಂತು ಜಲಾವೃತಗೊಂಡಿವೆ. ಮನೆ, ಅಂಗಡಿಗಳು, ಕಚೇರಿ, ಮಾರ್ಕೇಟ್ ಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜಧಾನಿ ಬೆಂಗಳೂರನ್ನು ’ಬ್ರ್ಯಾಂಡ್ ಬೆಂಗಳೂರು’ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಯೋಜನೆ ಹಾಗೂ ಮಳೆ ಅವಾಂತರದ ಬಗ್ಗೆ ಬಿಜೆಪಿ ಕಿಡಿಕಾರಿದೆ.
ಬೆಂಗಳೂರಿಗರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತೆಪ್ಪ ಭಾಗ್ಯ ನೀಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಪ್ರಕಟಿಸಿ ಟೀಕಿಸಿದೆ. ಭಾರಿ ಮಳೆಯಿಂದಾಗಿ ಬೆಂಗಳೂರು ನದಿಯಂತಾಗಿದೆ. ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಜನರಿಗೆ ತೆಪ್ಪ ಭಾಗ್ಯ ನೀಡುತ್ತಾರೆ ಎಂದು ವ್ಯಂಗ್ಯವಾಡಿದೆ. ವಿಧಾನಸೌಧಕ್ಕೆ ಸಿಎಂ ಸಿದ್ದರಾಮಯ್ಯನವರು ಕಾರಿನ ಬದಲು ತೆಪ್ಪದಲ್ಲಿ ಹೋಗಬೇಕಾದ ಸ್ಥಿತಿ ಎಂಬ ರೀತಿಯಲ್ಲಿ ಅಣಕವಾಡಿದೆ.