ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಹಲವೆಡೆ ರಸ್ತೆಗಳು, ಮನೆಗಳು, ಬಡಾವಣೆಗಳು ಜಲಾವೃತಗೊಂಡಿದ್ದು, ಜನರು ಪದರಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಅಪಾರ್ಟ್ ಮೆಂಟ್ ಕಾಂಪೌಂಡ್ ಒಂದು ಕುಸಿದ ಪರಿಣಾಮ ವಾಹನಗಳು ಜಖಂಗೊಂಡಿರುವ ಘಟನೆ ಬಿನ್ನಿಪೇಟೆಯಲ್ಲಿ ನಡೆದಿದೆ.
ಬೆಂಗಳೂರಿನ ಬಿನ್ನಿಪೇಟೆ ಪಾರ್ಕ್ ವ್ಯೂವ್ ಅಪಾರ್ಟ್ ಮೆಂಟ್ ನ 7 ಅಡಿ ಎತ್ತರದ ಸುಮಾರು ಹತ್ತು ಅಡಿ ಉದ್ದದ ಕಾಂಪೌಂಡ್ ಕುಸಿದು ಬಿದ್ದಿದೆ. ಪರಿಣಾಮ ಅಪಾರ್ಟ್ ಮೆಂಟ್ ಬಳಿ ನಿಂತಿದ್ದ ಹಲವು ಕಾರು, 20ಕ್ಕೂ ಹೆಚ್ಚು ಬೈಕ್ ಗಳು ಜಖಂ ಗೊಂಡಿವೆ.
ಬಿಬಿಎಂಪಿ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಗೋಡೆಯ ಅವಸೇಷಗಳನ್ನು ತೆರವುಗೊಳಿಸಿದ್ದಾರೆ. ಮತ್ತೊಂದೆಡೆ ಯಲಹಂಕ ಬಳಿಯ ಕೇಂದ್ರೀಯ ವಿಹಾರ ಅಪಾರ್ಟ್ ಮೆಂಟ್ ಬಳಿ ಕಾಂಪೌಂಡ್ ಕುಸಿದು ಬಿದ್ದಿದೆ. ಪರಿಣಾಮ ಯಲಹಂಕ ಕೆರೆ ಹಾಗೂ ಅಪಾರ್ಟ್ ಮೆಂಟ್ ಮಧ್ಯೆ ಇದ್ದ ಖಾಲಿ ಜಾಗ ಸಂಪೂರ್ಣ ಜಲಾವೃತಗೊಂಡಿದ್ದು, ಅಪಾರ್ಟ್ ಮೆಂಟ್ ಮನೆಗಳಿಗೂ ನೀರು ನುಗ್ಗಿದೆ.