ಬೆಂಗಳೂರು: ಡಿಜಿಟಲ್ ಇಂಡಿಯಾ ಅಭಿಯಾನದಡಿ ದೇಶದ ಪ್ರತಿಯೊಂದು ಕ್ಷೇತ್ರಗಳಲ್ಲೂ ಇದೀಗ ಡಿಜಿಟಲ್ ಪಾವತಿ ಹೆಚ್ಚುತ್ತಿದೆ. ನಗದು ಹಣ ಪಾವತಿ ಮಾಡುವವರ ಸಂಖ್ಯೆಯೇ ವಿರಳವಾಗಿದೆ. ಇದೀಗ ಮೆಟ್ರೋ ಮಾದರಿ ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆ ಎಲ್ಲಾ ರೈಲುಗಳಿಗೂ ಬಂದಿದೆ.
ಬೆಂಗಳೂರಿನ ಎಲ್ಲಾ ರೈಲು ನಿಲ್ದಾಣಗಳಲ್ಲಿ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸುವ ಆನ್ ಲೈನ್ ಪೇಮೆಂಟ್ ವ್ಯವಸ್ಥೆ ಜಾರಿಗೆ ಬಂದಿದೆ.
ಬೆಂಗಳೂರು ರೈಲ್ವೆ ವ್ಯಾಪ್ತಿಯ 108 ನಿಲ್ದಾಣಗಳಲ್ಲಿ ಇನ್ನುಮುಂದೆ ಆನ್ ಲೈನ್ ಪೇಮೆಂಟ್ ಮೂಲಕ ಹಣ ಪಾವತಿ ಮಾಡಬಹುದು. ಬೆಂಗಳೂರಿನ ಕೆ.ಎಸ್.ಆರ್ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ, ಎಸ್ ಎಂವಿಟಿ, ಕಂಟೋನ್ಮೆಂಟ್ ಸೇರಿದಂತೆ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈಲು ನಿಲ್ದಾಣಗಳಲ್ಲಿ ಕ್ಯೂರ್ ಆರ್ ಕೋಡ್ ಗಳನ್ನು ಅಳವಡಿಸಲಾಗಿದೆ.
ಪ್ರಯಾಣಿಕರು ಇನ್ಮುಂದೆ ರೈಲು ಟಿಕೆಟ್ ಪಡೆಯಲು ಕ್ಯೂನಲ್ಲಿ ಗಂಟೆಗಟ್ಟಲೆ ಕಾಯಬೇಕಿಲ್ಲ. ಟಿಕೆಟ್ ಕೌಮ್ಟರ್ ನಲ್ಲಿ ಚಿಲ್ಲರೆ ಸಮಸ್ಯೆಯೂ ಉದ್ಭವಿಸಲ್ಲ. ಕ್ಯೂಆರ್ ಕೋಡ್ ಮೂಲಕ ಹಣ ಪಾವತಿಸಿ ಟಿಕೆಟ್ ಪಡೆಯಬಹುದಾಗಿದೆ.