ಬೆಂಗಳೂರು: ಚಿನ್ನಾಭರಣ ಎಗರಿಸಲು ಕಳ್ಳರಿಗೆ ಪೊಲೀಸರೇ ಸಾಥ್ ನೀಡಿರುವ ಘಟನೆ ನಡೆದಿದೆ. ದಾಳಿಯ ಹೆಸರಲ್ಲಿ ಕಳ್ಳರಿಗೆ ಸಾಥ್ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್ಸ್ ಟೇಬಲ್ ಸೇರಿ 7 ಮಂದಿಯನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಬಂಧನಕ್ಕೆ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಪರವಾನಿಗೆ ಇಲ್ಲದೆ ಚಿನ್ನಾಭರಣ ಪಾಲಿಶ್ ಅಂಗಡಿ ನಡೆಸುತ್ತಿದ್ದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆರೋಪಿಗಳು ಇದನ್ನೇ ಬಂಡವಾಳ ಮಾಡಿಕೊಂಡು ದಾಳಿಯ ಹೆಸರಲ್ಲಿ ಚಿನ್ನಾಭರಣ ದೋಚಿದ್ದಾರೆ. ಅಂಗಡಿಯ ಹಿಂದಿನ ಕಟ್ಟಡದ ಮಾಲೀಕ ಈ ಪ್ಲಾನ್ ಮಾಡಿದ್ದು, ಪೊಲೀಸರ ಜೊತೆಗೆ ಮಾತನಾಡಿ ಸಹಕಾರ ಕೇಳಿದ್ದಾನೆ. ಕಾಡುಗೋಡಿ ಪೊಲೀಸ್ ಠಾಣೆ ಕಾನ್ಸ್ ಟೇಬಲ್ ಗಳಾದ ಅಶೋಕ್ ಮತ್ತು ಚೌಡೇಗೌಡ ಸಹಕಾರ ನೀಡಿದ್ದಾರೆನ್ನಲಾಗಿದೆ.
ನವೆಂಬರ್ 11 ರಂದು ನಕಲಿ ದಾಳಿ ನಡೆದಿತ್ತು. ಎರಡು ದಿನಗಳ ಬಳಿಕ ಅಂಗಡಿ ಮಾಲೀಕ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂಗಡಿಗೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ನಕಲಿ ದಾಳಿ ದುಷ್ಕೃತ್ಯ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳರಿಗೆ ಸಹಕಾರ ನೀಡಿದ ಪೊಲೀಸ್ ಚೌಡೇಗೌಡ ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎನ್ನಲಾಗಿದೆ.