
ಬೆಂಗಳೂರು: ತಡರಾತ್ರಿ ಒಂದು ಗಂಟೆಯವರೆಗೂ ಪಬ್ ಗೆ ಅವಕಾಶ ನೀಡುವ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಿದ್ದು, ಲೈವ್ ಆಗಿರಬೇಕು. ರಾತ್ರಿ ಉದ್ಯೋಗಿಗಳು, ಸಂಚಾರ ಮಾಡುವವರು ಇರುವುದರಿಂದ ಪಬ್ ಗಳು ತಡರಾತ್ರಿವರೆಗೆ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಗೃಹ ಸಚಿವರು ಹಾಗೂ ಅಪಕಾರಿ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಹೆಚ್.ಎಸ್. ಗೋಪಿನಾಥ್ ಅವರ ಪ್ರಶ್ನೆಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಉತ್ತರಿಸುವ ವೇಳೆ ಮತ್ತೆ ಪ್ರವೇಶಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಪಬ್ ಗಳಿಗೆ ಬೆಳಗ್ಗೆ 10ಗಂಟೆಯಿಂದ ರಾತ್ರಿ 11:30ವರೆಗೆ ವ್ಯಾಪಾರ ಮಾಡಲು ಅವಕಾಶ ಇದ್ದರೂ, ಅವಧಿ ಮೇಲೆ ಕಾರ್ಯನಿರ್ವಹಿಸುತ್ತಿರುವೆ. ರೆಸ್ಟೋರೆಂಟ್ ಗೆ ಹೊಂದಿಕೊಂಡಿರುವ ಪಬ್ ಗಳಿಗೆ ರಾತ್ರಿ ಒಂದು ಗಂಟೆಯವರೆಗೆ ಕಾರ್ಯನಿರ್ವಹಿಸಲು ಅವಕಾಶವಿದ್ದು, ಇದೇ ರೀತಿ ಇತರೆ ಪಬ್ ಗಳಿಗೆ ಒಂದು ಗಂಟೆಯವರೆಗೆ ತೆರೆಯಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಅಬಕಾರಿ ಸಚಿವರು, ನಿಯಮದ ಪ್ರಕಾರ ರಾತ್ರಿ 11:30 ರವರೆಗೆ ವ್ಯಾಪಾರ ಮಾಡಲು ಅವಕಾಶವಿದೆ. ನಿಯಮ ಮೀರಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಿಯಮಗಳು ಒಂದು ರೀತಿಯಲ್ಲಿ ಕಿರುಕುಳ ನೀಡಲು ಅವಕಾಶ ನೀಡುತ್ತಿವೆ. ಬೆಂಗಳೂರು ಅಂತರಾಷ್ಟ್ರೀಯ ನಗರವಾಗಿದೆ. ರಾತ್ರಿ ಕೆಲಸ ಮಾಡುವವರು ಸಾಕಷ್ಟು ಜನರಿದ್ದಾರೆ. ಈ ಸಂಬಂಧ ಇರುವ ಸಮಸ್ಯೆ ಬಗ್ಗೆ ಹರಿಸಲಾಗುವುದು ಎಂದು ಹೇಳಿದ್ದಾರೆ.