ಬೆಂಗಳೂರು: ಆನೇಕಲ್ ತಾಲೂಕಿನ ಇಂಡ್ಲಬೆಲೆ ಸಮೀಪ ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಭೂಮಿ ಪೂಜೆಗಾಗಿ ಶಾಮಿಯಾನ ಹಾಕುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಲ್ಬುರ್ಗಿಯ ಆಕಾಶ್ ಮತ್ತು ಚಾಮರಾಜನಗರ ಜಿಲ್ಲೆಯ ಮಾದೇಶ ಹಾಗೂ ಟಿ. ನರಸೀಪುರದ ವಿಷಕಂಠ ಮತ್ತು ಜಾರ್ಖಂಡ್ ಮೂಲದ ವಿಜಯಸಿಂಗ್ ಅವರು ಮೃತಪಟ್ಟವರು ಎಂದು ಹೇಳಲಾಗಿದೆ. ಅವಘಡದಲ್ಲಿ ಐವರು ಕಾರ್ಮಿಕರು ಗಾಯಗೊಂಡಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಮಿಯಾನ ಮಾಲೀಕ ಜಗದೀಶ್ ಮತ್ತು ಅಪಾರ್ಟ್ಮೆಂಟ್ ಸೈಟ್ ಇಂಜಿನಿಯರ್ ರಾಮಕುಮಾರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಶಾಮಿಯಾನ ಹಾಕುವ ವೇಳೆ ಕಬ್ಬಿಣದ ಕಂಬ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ತಗುಲಿದೆ. ಅದನ್ನು ಹಿಡಿದುಕೊಂಡಿದ್ದ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಐವರು ಗಾಯಗೊಂಡಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.