ಕಳೆದು ಹೋದ ವಸ್ತುಗಳನ್ನು ಮರಳಿ ಪಡೆಯೋದು ಅಂದ್ರೆ ಸುಲಭದ ಮಾತಲ್ಲ. ಆದರೆ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬರು ಪೊಲೀಸರ ನೆರವಿನಿಂದ ತಾವು ಕಳೆದುಕೊಂಡಿದ್ದ ವಸ್ತುಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ವಸ್ತುಗಳನ್ನು ಮರಳಿ ಪಡೆದ ವ್ಯಕ್ತಿಯು ಇಂದಿರಾ ನಗರ ಠಾಣಾ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇಂದಿರಾನಗರ ಪೊಲೀಸ್ ಠಾಣೆ ಬಳಿಯ ಕೆಫೆಯಲ್ಲಿ ರಾತ್ರಿ 11 ಗಂಟೆಗೆ ಅಂಗಡಿ ಮುಚ್ಚಲು ಮುಂದಾದಾಗ ಲ್ಯಾಪ್ಟಾಪ್ ಮತ್ತು ಮೊಬೈಲ್ ಇರುವ ನನ್ನ ಬ್ಯಾಗ್ ಅನ್ನು ನಾನು ಮರೆತಿದ್ದೆ. ಉಬರ್ನಲ್ಲಿದ್ದ ನನಗೆ 15 ನಿಮಿಷಗಳ ಬಳಿಕ ನನ್ನ ಬ್ಯಾಗ್ ಬಗ್ಗೆ ನೆನಪಾಯ್ತು. ಕೆಫೆಗೆ ಹೋದೆ. ಆದರೆ ಅಲ್ಲಿ ಯಾರೂ ಇರಲಿಲ್ಲ. ಅದನ್ನು ಕೆಫೆ ಮಾಲೀಕ ನೋಡಿರಬಹುದು ಎಂಬುದು ನನಗೆ ಖಾತ್ರಿಯಿತ್ತು. ಆದರೆ ಅವರನ್ನು ಸಂಪರ್ಕಿಸಲು ನನ್ನ ಬಳಿ ಅವರ ಮೊಬೈಲ್ ನಂಬರ್ ಇರಲಿಲ್ಲ ಎಂದು ರೆಡಿಟ್ ಪೋಸ್ಟ್ನಲ್ಲಿ ಬರೆಯಲಾಗಿದೆ.
ಇದರಿಂದ ಆತಂಕಗೊಂಡ ವ್ಯಕ್ತಿಯು ಅಲ್ಲೇ ಗಸ್ತು ತಿರುಗುತ್ತಿದ್ದ ಪೊಲೀಸರನ್ನು ಗಮನಿಸಿದರು. ಪೊಲೀಸರ ಬಳಿಯಲ್ಲಿ ವ್ಯಕ್ತಿಯು ತಾನು ಬ್ಯಾಗ್ ಕಳೆದುಕೊಂಡ ಬಗ್ಗೆ ವಿವರಿಸಿರು. ಆಗ ಪೊಲೀಸರು ಹತ್ತಿರದಲ್ಲೇ ಇದ್ದ ಪೊಲೀಸ್ ಠಾಣೆಗೆ ತೆರಳುವಂತೆ ಸೂಚನೆ ನೀಡಿದರು. ಅಲ್ಲಿಂದ ಪೊಲೀಸರು ಕೆಫೆ ಮಾಲೀಕನನ್ನು ಸಂಪರ್ಕಿಸಿದ್ದಾರೆ. ಇದಾದ ಬಳಿಕ ಮನೆಗೆ ಹಿಂತಿರುಗಿದ ವ್ಯಕ್ತಿಯು ಮಾರನೇ ದಿನ ಕೆಫೆಗೆ ಬರಲು ನಿರ್ಧರಿಸಿದರು.
ಮಾರನೇ ದಿನ ಕೆಫೆಗೆ ಭೇಟಿ ನೀಡಿದಾಗ ಮಧ್ಯಾಹ್ನ 1ಗಂಟೆವರೆಗೆ ಕೆಫೆ ತೆರೆಯುವುದಿಲ್ಲ ಎಂದು ತಿಳಿಯಿತು. ಪೊಲೀಸರು ಕೆಫೆ ಮಾಲೀಕ ಅಲ್ಲೆ ಹತ್ತಿರದಲ್ಲಿ ವಾಸವಿದ್ದಾರೆ ಎಂಬುದನ್ನು ಪತ್ತೆ ಮಾಡಿದರು. ಹಾಗೂ ಕೆಫೆ ಮಾಲೀಕನ ಬಳಿ ಬ್ಯಾಗ್ ಇರುವುದನ್ನು ಖಾತ್ರಿ ಪಡಿಸಿಕೊಂಡ ಪೊಲೀಸರು ಅದನ್ನು ಸಂಬಂಧಪಟ್ಟ ಹಿಂದಿರುಗಿಸಲು ಸೂಚನೆ ನೀಡಿದ್ದಾರೆ.
ಪೊಲೀಸರ ಸಹಾಯದಿಂದ ಬ್ಯಾಗ್ ಹಿಂಪಡೆದ ಬಳಿಕ ಅದರಲ್ಲಿ ಎಲ್ಲಾ ವಸ್ತುಗಳು ಸರಿಯಾಗಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಪೊಲೀಸರು ಹೇಳಿದರು ಎಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.