ಬೆಂಗಳೂರು: ಬಾಂಗ್ಲಾದೇಶದ ವ್ಲಾಗರ್ ದಂಪತಿಯನ್ನು ವಂಚಿಸಿದ ಬೆಂಗಳೂರಿನ ಆಟೋರಿಕ್ಷಾ ಚಾಲಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಆಟೋ ಚಾಲಕ, ಬಾಂಗ್ಲಾದೇಶಿ ಪ್ರವಾಸಿಗರಿಗೆ ವಂಚಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ದಂಪತಿ ತಮ್ಮ ಟ್ರಾವೆಲ್ ವ್ಲಾಗ್‌ನ ಭಾಗವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದರು.
ಬೆಂಗಳೂರು ಅರಮನೆಗೆ ಭೇಟಿ ನೀಡುವ ಸಲುವಾಗಿ ದಂಪತಿ ಆಟೋ ಹತ್ತಿದ್ದಾರೆ. ಆದರೆ, ಆಟೋ ಚಾಲಕ ಮೀಟರ್ ಹಾಕದೆ, ಹತ್ತಿರದ ಪ್ರಯಾಣಕ್ಕೆ ದುಬಾರಿ ಮೊತ್ತ ಕೇಳಿದ್ದಾನೆ. ಅಷ್ಟು ಮೊತ್ತ ಯಾಕೆ ಕೊಡಬೇಕು ಎಂದು ವ್ಲಾಗರ್ ಪ್ರಶ್ನಿಸಿದ್ರೂ ಕೇಳದೆ ಅವರಿಂದ ಹಣವನ್ನು ಪೀಕಿಸಿದ್ದಾನೆ.
ಈ ಸಂಪೂರ್ಣ ಘಟನೆಯನ್ನು ವ್ಲಾಗರ್ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಆಟೋ ಚಾಲಕನ ಈ ರೀತಿಯ ವರ್ತನೆಯನ್ನು ವ್ಲಾಗರ್ ಬಹಿರಂಗಪಡಿಸಿದ್ದಾರೆ. ಈ ವಿಡಿಯೋವನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಕೂಡಲೇ ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಯ್ತು.
ವಿಡಿಯೋ ವೈರಲ್ ಆದ ನಂತರ ಸದಾಶಿವನಗರ ಸಂಚಾರ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಆಟೋ ಚಾಲಕನನ್ನು ಗುರುತಿಸಿ ಆತನನ್ನು ಬಂಧಿಸಿದ್ದಾರೆ. ಪ್ರವಾಸಿಗರನ್ನು ವಂಚಿಸಲು ಯತ್ನಿಸಿದ ಆಟೋ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.