ಬೆಂಗಳೂರು: ಮೊಬೈಲ್ ಕಳವು ತಡೆಗೆ ಪೊಲೀಸರು ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ಕಳ್ಳರು ಮೊಬೈಲ್ ಕದ್ದರೂ ಕೂಡ ಅದನ್ನು ಬಳಸುವುದು ಅಸಾಧ್ಯವಾಗಿದೆ.
ಬೆಂಗಳೂರು ಮಹಾನಗರದಲ್ಲಿ ಸಿಇಐಆರ್ ಅಪ್ಲಿಕೇಶನ್ ಮೂಲಕ ಮೊಬೈಲ್ ಫೋನ್ ಕಳ್ಳತನ ತಡೆಗೆ ಪೊಲೀಸರು ಯೋಜನೆ ರೂಪಿಸಿದ್ದಾರೆ. ಈ ಅಪ್ಲಿಕೇಶನ್ ಮೂಲಕ ಮೊಬೈಲ್ ಫೋನ್ ಕಳ್ಳರಿಗೆ ಶಾಕ್ ನೀಡಲು ಪೊಲೀಸರು ಮುಂದಾಗಿದ್ದು, ಇನ್ನು ಮುಂದೆ ಮೊಬೈಲ್ ಕದ್ದರೂ ಬಳಸುವಂತಿಲ್ಲ.
ಕೇಂದ್ರ ಸರ್ಕಾರ ರಚಿಸಿದ್ದ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ ಆಪ್ ಬಳಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ. ಮೊಬೈಲ್ ಕಳೆದುಕೊಂಡವರು ಬೆಂಗಳೂರು ಪೊಲೀಸರ ಇ- ಲಾಸ್ಟ್ ನಲ್ಲಿ ಮೊಬೈಲ್ ಐಎಂಇಐ ಸಂಖ್ಯೆಯೊಂದಿಗೆ ದೂರು ದಾಖಲಿಸಬೇಕು.
ನಂತರ ಸಿಇಐಆರ್ ಅಪ್ಲಿಕೇಶನ್ ಗೆ ಮಾಹಿತಿ ರವಾನೆಯಾಗಲಿದ್ದು, ಮೊಬೈಲ್ ಅಕ್ಟಿವೇಶನ್ ಸಂಪೂರ್ಣ ಬ್ಲಾಕ್ ಆಗುತ್ತದೆ. ನೋಂದಾಯಿತ ಸಂಖ್ಯೆಯ ಮೊಬೈಲ್ ಅನ್ನು ಬ್ಲಾಕ್ ಮಾಡಲಿದ್ದು, ಯಾವುದೇ ರೀತಿಯಲ್ಲಿ ಅದು ಕಾರ್ಯನಿರ್ವಹಿಸುವುದಿಲ್ಲ. ಮೊಬೈಲ್ ಕಳವು ಮಾಡಿದರೂ ಅದು ಬಳಸಲು ಬರುವುದಿಲ್ಲ. ಈ ಮೂಲಕ ಮೊಬೈಲ್ ಕಳವು ತಡೆಗೆ ಪೊಲೀಸರು ಯೋಜನೆ ರೂಪಿಸಿದ್ದಾರೆ.
ಕಳವು ಮಾಡಿದ ಫೋನ್ ಆನ್ ಆದ ಕೂಡಲೇ ಲೊಕೇಶನ್ ಪತ್ತೆಯಾಗುತ್ತದೆ. ದೆಹಲಿ ಮತ್ತು ಮುಂಬೈನಲ್ಲಿ ಈ ಆಪ್ ಬಳಸಲಾಗುತ್ತಿದ್ದು, ಬೆಂಗಳೂರಿನಲ್ಲಿಯೂ ಮೊಬೈಲ್ ಕಳವು ಪ್ರಕರಣ ಹೆಚ್ಚಾಗುತ್ತಿರುವುದರಿಂದ ಪೊಲೀಸರು ಈ ಆಪ್ ಬಳಕೆಗೆ ಮುಂದಾಗಿದ್ದಾರೆ.