ಬೆಂಗಳೂರು: ಇನ್ನು ಮುಂದೆ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.
ಪೋಷಕರನ್ನು ವೃದ್ದಾಶ್ರಮಕ್ಕೆ ಸೇರಿಸುವ ಮಕ್ಕಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. ಈಗಾಗಲೇ ವೃದ್ಧಾಶ್ರಮಗಳಲ್ಲಿ ಇರುವ ಪೋಷಕರಿಗೆ ಮುಕ್ತಿ ಕೊಡಿಸಲು ಪೊಲೀಸರು ಮುಂದಾಗಿದ್ದು, ತಂದೆ ತಾಯಿಗಳನ್ನು ವೃದ್ದಾಶ್ರಮದಿಂದ ಕರೆದೊಯ್ಯುವಂತೆ ಮಕ್ಕಳಿಗೆ ಸೂಚನೆ ನೀಡಿದ್ದಾರೆ.
2024ರ ಹೊಸ ವರ್ಷದ ನಂತರ ಬೆಂಗಳೂರು ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ. ಆಯುಕ್ತ ಬಿ. ದಯಾನಂದ್ ಅವರ ಸೂಚನೆ ಮೇರೆಗೆ ನಗರದ ವೃದ್ಧಾಶ್ರಮಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ವೃದ್ದರನ್ನು ಸರಿಯಾಗಿ ನೋಡಿಕೊಳ್ಳದ, ಹೆತ್ತವರನ್ನು ಮನೆಯಿಂದ ಹೊರ ಹಾಕಿದ ಮಕ್ಕಳ ವಿರುದ್ಧ ಕೇಸ್ ಬುಕ್ ಮಾಡಲು ಮುಂದಾಗಿದ್ದಾರೆ.
ಪೋಷಕರನ್ನು ಸಾಕಲು ಶಕ್ತರಾಗಿದ್ದರೂ ಅನೇಕರು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ. ಇಂತಿಷ್ಟು ಹಣ ಕೊಟ್ಟು ಪೋಷಕರನ್ನು ಮಕ್ಕಳು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದು, ಕೊನೆಗಾಲದಲ್ಲಿ ಕುಟುಂಬದಿಂದ ಬೇರೆಯಾಗಿ ಹಿರಿಯ ಜೀವಗಳು ಯಾತನೆ ಪಡುತ್ತಿವೆ. ವೃದ್ಧಾಶ್ರಮಗಳಲ್ಲಿ ಮಾನಸಿಕ ಯಾತನೆ ಅನುಭವಿಸುತ್ತಿದ್ದ ಹಿರಿಯ ಜೀವಿಗಳನ್ನು ಸಾಕಲು ಶಕ್ತರಾಗಿರುವ ಮಕ್ಕಳನ್ನು ಗುರುತಿಸಿ ವಾಪಸ್ ಕಳುಹಿಸಲು ಪೊಲೀಸರು ಪ್ಲಾನ್ ಮಾಡಿಕೊಂಡಿದ್ದಾರೆ.
ನಗರದ ವೃದ್ಧಾಶ್ರಮಗಳಲ್ಲಿ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಅನ್ವಯ ಪೊಲೀಸರು ಕೇಸ್ ದಾಖಲಿಸಲಿದ್ದಾರೆ. ಮಕ್ಕಳಿಂದ ದೂರವಾಗಿ ಕಣ್ಣೀರಿಡುತ್ತಿರುವ ವೃದ್ಧರ ರಕ್ಷಣೆಗೆ ಪೊಲೀಸರು ಮುಂದಾಗಿದ್ದು, ಇಳಿ ವಯಸ್ಸಿನಲ್ಲಿ ಮತ್ತೆ ಮನೆ ಮಂದಿಯೊಂದಿಗೆ ಇರುವಂತೆ ಮಾಡಲು ಬೆಂಗಳೂರು ಪೊಲೀಸ್ ಆಯುಕ್ತರ ಸೂಚನೆಯಂತೆ ಕ್ರಮ ಕೈಗೊಂಡಿದ್ದಾರೆ.