ಸಂಚಾರ ನಿಯಮ ಉಲ್ಲಂಘನೆಗಳನ್ನು ವರದಿ ಮಾಡಲು ಸಾರ್ವಜನಿಕರು, ಬೆಂಗಳೂರು ಟ್ರಾಫಿಕ್ ಪೋಲೀಸ್ (ಬಿಟಿಪಿ) ʼಪಬ್ಲಿಕ್ ಐʼ ಅಪ್ಲಿಕೇಶನ್ ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ, ರಸ್ತೆ ಸುರಕ್ಷತೆ ಮತ್ತು ಶಿಸ್ತು ಹೆಚ್ಚಿಸಲು ಈ ಮೂಲಕ ಸಹಾಯ ಮಾಡುತ್ತಿದ್ದಾರೆ.
2024 ರಲ್ಲಿ, ಅಪ್ಲಿಕೇಶನ್ ಬಳಕೆಯಲ್ಲಿ ಏರಿಕೆಯಾಗಿದ್ದು, ಪ್ರತಿ ದಿನ ಸರಾಸರಿ 850 ಉಲ್ಲಂಘನೆಗಳು ವರದಿಯಾಗುತ್ತಿವೆ. ಇವುಗಳಲ್ಲಿ ಸುಮಾರು 600 ಪ್ರಕರಣಗಳಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಮಾಲೀಕರುಗಳ ವಿರುದ್ದ ಕ್ರಮ ಕೈಗೊಂಡಿದ್ದಾರೆ.
ಆಗಸ್ಟ್ 2024 ರ ಹೊತ್ತಿಗೆ, ಒಟ್ಟು 2,55,048 ಉಲ್ಲಂಘನೆಗಳನ್ನು ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡಲಾಗಿದೆ, ಇದರ ಪರಿಣಾಮವಾಗಿ 2,13,048 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಕಳೆದ ವರ್ಷ, 3,14,564 ಉಲ್ಲಂಘನೆಗಳು ವರದಿಯಾಗಿದ್ದು, 2,43,116 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. ಸೆಪ್ಟೆಂಬರ್ 2015 ರಲ್ಲಿ ಪ್ರಾರಂಭವಾದಾಗಿನಿಂದ, ಅಪ್ಲಿಕೇಶನ್ ನಲ್ಲಿ 19 ಲಕ್ಷಕ್ಕೂ ಹೆಚ್ಚು ಉಲ್ಲಂಘನೆಗಳನ್ನು ಅಪ್‌ಲೋಡ್ ಮಾಡಲಾಗಿದೆ, 16 ಲಕ್ಷ ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
ʼಪಬ್ಲಿಕ್ ಐʼ ಅಪ್ಲಿಕೇಶನ್ ಸಾರ್ವಜನಿಕರು, ಸಂಚಾರ ಉಲ್ಲಂಘನೆಗಳ ಫೋಟೋಗಳು ಅಥವಾ ವೀಡಿಯೊಗಳನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸುತ್ತಿದ್ದು, ಅದನ್ನು ಪೊಲೀಸರು ಪರಿಶೀಲಿಸುತ್ತಾರೆ. ಸಲ್ಲಿಕೆ ಮಾನ್ಯವಾಗಿರಲು, ಉಲ್ಲಂಘನೆ ಮತ್ತು ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೋಚರಿಸಬೇಕು. ಉಲ್ಲಂಘನೆ ದೃಢಪಟ್ಟರೆ, ಪೊಲೀಸರು ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಾರೆ.