ಬೆಂಗಳೂರು ಪೊಲೀಸರು ಬಿಬಿಎಂಪಿ ಜೊತೆ ಸೇರಿಕೊಂಡು ಜನರಿಗಾಗಿ ಕ್ಯೂಆರ್ ಕೋಡ್ ಸೇವೆಯನ್ನು ಆರಂಭಿಸಿದ್ದು ಇದರ ಮೂಲಕ ಸಾರ್ವಜನಿಕರು ತಮಗೆ ಸಿಗುತ್ತಿರುವ ಸಾರ್ವಜನಿಕ ಸೇವೆಗಳ ಬಗ್ಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಕ್ಯೂಆರ್ ಕೋಡ್ಗಳು ಎಲ್ಲಾ ಪೊಲೀಸ್ ಠಾಣೆ ಹಾಗೂ ರಸ್ತೆಗಳ ಬೋರ್ಡ್ಗಳಲ್ಲಿ ಲಭ್ಯವಿರಲಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಪೊಲೀಸ್ ಕಮೀಷನರ್ ಬಿ. ದಯಾನಂದ ಈ ಸಂಬಂಧ ಟ್ವೀಟ್ ಮಾಡಿದ್ದು, ಬೆಂಗಳೂರು ನಗರ ಪೊಲೀಸ್ನ ಎಲ್ಲಾ ಠಾಣೆಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಪ್ರತಿಕ್ರಿಯೆ ಸೇವೆಯನ್ನು ಪರಿಚಯಿಸಿದ್ದೇವೆ. ಇಲ್ಲಿ ನೀವು ನಮ್ಮ ಸೇವೆಯ ಕುರಿತು ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ನೀಡಬಹುದಾಗಿದೆ. ಇದರಿಂದ ನಿಮಗೆ ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡುತ್ತೆ ಎಂದು ಬರೆದುಕೊಂಡಿದ್ದಾರೆ.
ಕೇವಲ ನಗರದ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೇ ಬೆಂಗಳೂರಿನ ಅನೇಕ ಮಾರ್ಗಗಳಲ್ಲಿ ಈ ಕ್ಯೂಆರ್ ಕೋಡ್ಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ತಮ್ಮ ಸ್ಮಾರ್ಟ್ ಫೋನ್ನಲ್ಲಿ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆಯೇ ಇದು ಸ್ಥಳೀಯ ಶಾಸಕರು, ಗುತ್ತಿಗೆದಾರರು, ಕಾರ್ಮಿಕರು ಮುಂತಾದವರ ಸಂಪರ್ಕ ಸಂಖ್ಯೆಗಳನ್ನು ಒಳಗೊಂಡಂತೆ ಮಾಹಿತಿಯನ್ನು ನೀಡುತ್ತದೆ. ಈ ಕ್ಯೂಆರ್ ಕೋಡ್ ಮೂಲಕ ನಾಗರಿಕ ಸಂಬಂಧಿ ಸಮಸ್ಯೆಗಳನ್ನು ನೇರವಾಗಿ ಬಿಬಿಎಂಪಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ.
ಜೂನ್ ತಿಂಗಳಲ್ಲಿ ರಾಜ್ಯ ಮಹಾನಿರ್ದೇಶಕರು ಹಾಗೂ ಡಿಜಿ ಐಜಿಪಿ ಅಲೋಕ್ ಮೋಹನ್ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಫೋನ್ ಸಂಖ್ಯೆಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಇಡಬೇಕು ಎಂದು ಸೂಚನೆ ನೀಡಿದ್ದರು. ಜನರು ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದು ಅವರಿಗೆ ಅನುಕೂಲವಾಗಬೇಕು ಅನ್ನುವ ದೃಷ್ಟಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.