ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರಿನ ಕೋರಮಂಗಲದ ಬಳಿ ಪಿಜಿಗೆ ನುಗ್ಗಿ ಯುವತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಮಧ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಭೋಪಾಲ್ ಮೂಲದ ಅಭಿಷೇಕ್ ಬಂಧಿತ ಆರೋಪಿ. ಘಟನೆ ನಡೆದ ಮೂರು ದಿನಗಳಲ್ಲೇ ಬೆಂಗಳೂರಿನ ಕೋರಮಂಗಲ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರ ಮೂಲದ ಕೃತಿ ಕುಮಾರಿ (24) ಕೊಲೆಯಾದ ಯುವತಿ. ಖಾಸಗಿ ಕಂಪನಿಯಲ್ಲಿ ಡೆವಲಪ್‌ಮೆಂಟ್ ಅಸೋಸಿಯೇಟ್ ಆಗಿದ್ದ ಕೃತಿ ಕುಮಾರಿ ಮಾರ್ಚ್‌ನಿಂದ ವೆಂಕಟಶಿವಾರೆಡ್ಡಿ ಲೇಔಟ್‌ನ ಭಾರ್ಗವಿ ಸ್ಟೇಯಿಂಗ್ ಹೋಮ್ಸ್ ಫಾರ್ ಲೇಡೀಸ್ ಪಿಜಿಯಲ್ಲಿ ನೆಲೆಸಿದ್ದರು. ಕೃತಿ ಕುಮಾರಿಯ ಗೆಳತಿಯನ್ನು ಅಭಿಷೇಕ್ ಪ್ರೀತಿಸಿದ್ದ. ಬಾಡಿಗೆ ಮನೆ ಮಾಡಿ ಆಕೆಯನ್ನು ಕೂಡಿ ಹಾಕಿದ್ದ. ವಿಷಯ ತಿಳಿದ ಕೃತಿ ಕುಮಾರಿ ಆಕೆಯನ್ನು ತನ್ನ ಪಿಜಿಗೆ ಕರೆಸಿಕೊಂಡು ಇಲ್ಲೇ ಇರುವಂತೆ ಕೃತಿ ಹೇಳಿದ್ದಳು. ತನ್ನ ಪ್ರೇಯಸಿಯನ್ನು ಪಿಜಿಗೆ ಕರೆಸಿಕೊಂಡಿದ್ದಕ್ಕೆ ಕೋಪಗೊಂಡಿದ್ದ ಅಭಿಷೇಕ್ ಜುಲೈ 23ರ ರಾತ್ರಿ ಪಿಜಿಗೆ ನುಗ್ಗಿ ಕೃತಿ ಕುಮಾರಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದ.
ಅಭಿಷೇಕ್ ಪಿಜಿಗೆ ಬಂದ ದೃಶ್ಯ ಹಾಗೂ ಕೃತಿ ಕುಮಾರಿಗೆ ಚಾಕುವಿನಿಂದ ಮನಬಂದಂತೆ ಇರಿಯುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದ. ಇದೀಗ ಕೋರಮಂಗಲ ಪೊಲೀಸರು ಆರೋಪಿಯನ್ನು ಮಧ್ಯ ಪ್ರದೇಶದಲ್ಲಿ ಬಂಧಿಸಿದ್ದಾರೆ.
ಲೇಡಿಸ್ ಪಿಜಿಗೆ ಯುವಕನೊಬ್ಬ ನುಗ್ಗಿ ಯುವತಿಯನ್ನು ಹತ್ಯೆ ಮಾಡಿದ್ದು, ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನಲ್ಲಿ ಲೇಡಿಸ್ ಪಿಜಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ?ಎಂಬ ಆತಂಕ ಎದುರಾಗಿದೆ.