ಬೆಂಗಳೂರಿನಿಂದ ಪಾಟ್ನಾಗೆ 139 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಗೋ ಏರ್ ವಿಮಾನದ ಇಂಜಿನ್ನಲ್ಲಿ ದೋಷ ಉಂಟಾದ ಹಿನ್ನೆಲೆಯಲ್ಲಿ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳಗ್ಗೆ 11:15ರ ಸುಮಾರಿಗೆ ವಿಮಾನವು ತುರ್ತು ಭೂಸ್ಪರ್ಶ ಮಾಡಿದೆ.
ಗೋ ಏರ್ ವಿಮಾನದ ಪೈಲಟ್ ನಾಗ್ಪುರ ಎಟಿಸಿಯನ್ನು ಸಂಪರ್ಕಿಸಿ ವಿಮಾನದ ಇಂಜಿನ್ನಲ್ಲಿ ಸಮಸ್ಯೆ ಇದೆ ಎಂದು ಮಾಹಿತಿ ರವಾನಿಸಿದ್ದಾರೆ. ಅಲ್ಲದೇ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಅಬಿದ್ ರೂಹಿ ಮಾಹಿತಿ ನೀಡಿದ್ರು. ಈ ವಿಮಾನದಲ್ಲಿ ಸಿಬ್ಬಂದಿಯನ್ನು ಹೊರತುಪಡಿಸಿ 139 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಮೂಲಕ ತುರ್ತು ಭೂಸ್ಪರ್ಶಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೆವು. ಅಗ್ನಿಶಾಮಕದಳ ಸಿಬ್ಬಂದಿ, ವೈದ್ಯರು, ಆ್ಯಂಬುಲೆನ್ಸ್ ಹಾಗೂ ಪೊಲೀಸ್ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದೃಷ್ಟವಶಾತ್ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ರೂಹಿ ಹೇಳಿದರು.