
ಬೆಂಗಳೂರು: ಬೆಂಗಳೂರು ಅರಮನೆ ಭೂಬಳಕೆ, ನಿಯಂತ್ರಣ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ. ವಿಧೇಯಕದ ಕುರಿತಾಗಿ ಸದನದಲ್ಲಿ ಆಡಳಿತ ಪಕ್ಷ, ವಿಪಕ್ಷದ ಸದಸ್ಯರ ನಡುವೆ ಜಟಾಪಟಿ ನಡೆದಿದೆ.
ರಾಜಕೀಯ ದ್ವೇಷಕ್ಕಾಗಿ ವಿಧೇಯಕ ತಂದಿದ್ದಾರೆ ಎಂದು ಬಿಜೆಪಿ ಸದಸ್ಯ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಸರ್ಕಾರಕ್ಕೆ ಚಾಮುಂಡೇಶ್ವರಿ ಶಾಪ ತಟ್ಟುತ್ತದೆ ಎಂದು ವಿಪಕ್ಷ ಉಪನಾಯಕ ಬೆಲ್ಲದ್ ಹೇಳಿದ್ದಾರೆ. ಸದನದಲ್ಲಿ ವಿಧೇಯಕದ ವಿರುದ್ಧ ಬಿಜೆಪಿ ಅಭಿಪ್ರಾಯ ತೋರ್ಪಡಿಸಿದೆ.
ಬಳ್ಳಾರಿ ಮತ್ತು ಜಯಮಹಲ್ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಜಾಗ ಸ್ವಾಧೀನಕ್ಕೆ ಬದಲಾಗಿ ಮೈಸೂರು ರಾಜಮನೆತನದ ವಾರಸುದಾರರಿಗೆ 3014 ಕೋಟಿ ರೂ. ವರ್ಗಾವಣೆ ಅಭಿವೃದ್ಧಿ ಹಕ್ಕುಗಳನ್ನು(ಟಿಡಿಆರ್) ಪರಿಹಾರ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ ಭೂ ಬಳಕೆ ಮತ್ತು ನಿಯಂತ್ರಣ ಮಸೂದೆ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.
ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಿದಲ್ಲಿ ಸರ್ಕಾರಕ್ಕೆ ಭಾರಿ ನಷ್ಟ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿತ್ತು. ಆದರೆ ಸುಪ್ರೀಂ ಕೋರ್ಟ್ ಅದನ್ನು ಒಪ್ಪದೇ ಟಿಡಿಆರ್ ಪರಿಹಾರ ನೀಡುವ ಆದೇಶ ಪಾಲಿಸಲು ಸೂಚಿಸಿತ್ತು. ಇದರ ನಡುವೆಯೂ ಸುಗ್ರೀವಾಜ್ಞೆಗೆ ಕಾನೂನು ರೂಪ ಕೊಡಲು ಸರ್ಕಾರ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.