ಕರ್ನಾಟಕದ 2021-22ರ ಆರ್ಥಿಕ ಸಮೀಕ್ಷೆಯ ವರದಿ ಹೊರಬಿದ್ದಿದ್ದು, ತಲಾ ಆದಾಯದ ಲೆಕ್ಕದಲ್ಲಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ರಾಜಧಾನಿಯ ತಲಾ ಆದಾಯ ಕಲಬುರಗಿಗಿಂತ ಐದು ಪಟ್ಟು ಹೆಚ್ಚಿದೆ ಎಂಬುದು ವರದಿಯಲ್ಲಿ ಬಯಲಾಗಿದ್ದು, ಈ ಮೂಲಕ ರಾಜ್ಯದಲ್ಲಿ ಈಗಲೂ ಸರಿಯಾಗಿ ಅಭಿವೃದ್ಧಿ ಕಾಣದ ಜಿಲ್ಲೆಗಳ ಮೇಲೆ ಬೆಳಕು ಚೆಲ್ಲುತ್ತದೆ.
ಕಲಬುರಗಿ ಸೇರಿ, ತಲಾ ಆದಾಯದ ವಿಭಾಗದಲ್ಲಿ ಕೊನೆಯ ಸ್ಥಾನದಲ್ಲಿರುವ ನಾಲ್ಕು ಜಿಲ್ಲೆಗಳು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರಿವೆ. ಬೆಂಗಳೂರಿನ ತಲಾ ಆದಾಯ 5,41,638 ರೂ. ಆದರೆ, ಕಲಬುರಗಿಯ ತಲಾ ಆದಾಯ 1,00,446 ರೂ. ಆಗಿದೆ. ದಕ್ಷಿಣ ಕನ್ನಡ 3,71,771 ರೂ. ಮೂಲಕ ಎರಡನೇ ಸ್ಥಾನದಲ್ಲಿದ್ದು, ಅದೇ ಬೆಳಗಾವಿ 1,16,510 ರೂ. ತಲಾ ಆದಾಯದ ಮೂಲಕ 22ನೇ ಸ್ಥಾನದಲ್ಲಿದೆ.
ಈ ಸಮೀಕ್ಷೆಯಲ್ಲಿ ಮೂವತ್ತು ಜಿಲ್ಲೆಗಳ ಡೇಟಾ ವರದಿಯಾಗಿದೆ, ಅದರಲ್ಲಿ 26 ರಾಜ್ಯಗಳ ತಲಾ ಆದಾಯ ಬೆಂಗಳೂರಿನ ಅರ್ಧದಷ್ಟಿದೆ ಎಂಬ ಅಂಶ ಬಯಲಾಗಿದೆ. ಇದರಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ ಎಂಬ ನಾಲ್ಕು ವಿಭಾಗಗಳಿವೆ. ಒಂದೊಂದು ವಿಭಾಗಗಳಲ್ಲಿ ಇಂತಿಷ್ಟು ಜಿಲ್ಲೆಗಳನ್ನು ಸೇರಿಸಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ರಾಮನಗರ, ದಾವಣಗೆರೆ, ಶಿವಮೊಗ್ಗ, ತುಮಕೂರು ಜಿಲ್ಲೆಗಳು ಬೆಂಗಳೂರು ವಿಭಾಗದಲ್ಲಿವೆ. ಈ ವಿಭಾಗದ ಸರಾಸರಿ ತಲಾ ಆದಾಯ 3,25,099 ರೂ. ಇದೆ.
ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಕೊಡಗು, ಮಂಡ್ಯ, ಮೈಸೂರು, ಉಡುಪಿ ಜಿಲ್ಲೆಗಳು ಮೈಸೂರಿನ ವಿಭಾಗದಲ್ಲಿದ್ದು, ಇದರ ಸರಾಸರಿ ತಲಾ ಆದಾಯ 2,23,305 ರೂಪಾಯಿ.
ಬಾಗಲಕೋಟೆ, ಬೆಳಗಾವಿ, ವಿಜಯಪುರ, ದಾರವಾಡ, ಗದಗ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳು ಬೆಳಗಾವಿ ವಿಭಾಗದಲ್ಲಿದ್ದು, ಇದರ ತಲಾ ಆದಾಯ 1,37,089 ರೂ.
ಇನ್ನು ಕಡೆಯದಾಗಿ ಕಲಬುರಗಿ, ಬಳ್ಳಾರಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳು ಕಲಬುರಗಿ ವಿಭಾಗದಲ್ಲಿದ್ದು, ಇದರ ತಲಾ ಆದಾಯ 1,23,489 ರೂ. ಇದೆ. ಒಟ್ಟಿನಲ್ಲಿ ಕರ್ನಾಟಕದ ರಾಜಧಾನಿ ಹಾಗೂ ಬೆಂಗಳೂರು ವಿಭಾಗ ಪರ್ ಕ್ಯಾಪಿಟ ಇನ್ಕಮ್ ನಲ್ಲಿ ಟಾಪ್ ಸ್ಥಾನದಲ್ಲಿವೆ.