ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಯೂನಿಫೈಡ್ ಯೂನಿವರ್ಸಿಟಿ ಕಾಲೇಜ್ ಮ್ಯಾನೇಜ್ಮೆಂಟ್ ಸಿಸ್ಟಮ್(UUCMS) ಅನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿದ್ದು, ಕೋಲಾರ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉನ್ನತ ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳನ್ನು ತಂತ್ರಾಂಶ ಜಾರಿಗೊಳಿಸಲಾಗಿದೆ. ಪರೀಕ್ಷೆಯ ಶುಲ್ಕ, ಫಲಿತಾಂಶ, ಮರು ಮೌಲ್ಯಮಾಪನ ಸೇರಿ ಎಲ್ಲಾ ಸೇವೆಗಳು ಒಂದೇ ಕಡೆ ಲಭ್ಯವಾಗುವಂತೆ ಮಾಡಲಾಗಿದೆ. ತಂತ್ರಾಂಶವನ್ನು ಹ್ಯಾಕ್ ಮಾಡಲಾಗಿದ್ದು, ತಮಗೆ ಲಾಗಿನ್ ಮಾಡಲು ಸಾಧ್ಯವಾಗುತ್ತಿಲ್ಲ. ಯಾವುದೇ ವಿವರಣೆ ಗಮನಕ್ಕೆ ಬರುತ್ತಿಲ್ಲ ಎಂದು ಕುಲ ಸಚಿವರು ದೂರು ನೀಡಿದ್ದಾರೆ.
ಬೆಂಗಳೂರು ಉತ್ತರ ವಿವಿ ಪರೀಕ್ಷಾ ಫಲಿತಾಂಶದಲ್ಲಿ ಅಕ್ರಮ ನಡೆದಿದೆ. ಯುಯುಸಿಎಂಎಸ್ ವೆಬ್ಸೈಟ್ ಹ್ಯಾಕ್ ಮಾಡಿ ಅಕ್ರಮ ಎಸಗಲಾಗಿದೆ. ಫೇಲ್ ಎಂದು ಪ್ರಕಟವಾದ ಫಲಿತಾಂಶ ಕೆಲವೇ ನಿಮಿಷದಲ್ಲಿ ಪಾಸ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಕೋಲಾರ ಸಿಇಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪ್ರಕರಣದ ತನಿಖೆ ಕೈಗೊಂಡಿದ್ದು, ಅಕ್ರಮದಲ್ಲಿ ಬೆಂಗಳೂರು ಉತ್ತರ ವಿವಿ ಸಿಬ್ಬಂದಿ ಭಾಗಿಯಾದ ಶಂಕೆ ಇದೆ. ವಿದ್ಯಾರ್ಥಿ ಪಾಸ್ ಮಾಡಲು 15ರಿಂದ 20 ಸಾವಿರ ರೂಪಾಯಿ ಪಡೆದ ಆರೋಪವಿದೆ. ಈ ಸಂಬಂಧ ಪೊಲೀಸರು ಓರ್ವನ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.