ಬೆಂಗಳೂರು: ಫಾಸ್ಟ್ ಟ್ಯಾಗ್ ಬದಲಿಗೆ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯ ಪ್ರಾಯೋಗಿಕ ಅನುಷ್ಠಾನಕ್ಕೆ ರಾಜ್ಯದ ಬೆಂಗಳೂರು- ಮೈಸೂರು ಎಕ್ಸ್ಪ್ರೆಸ್ ಹೈವೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಲೋಕಸಭೆ ಚುನಾವಣೆಗೆ ಮೊದಲು ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ 275 ಸೇರಿದಂತೆ ದೇಶದ ಆಯ್ದ ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಡೆತಡೆ ಇಲ್ಲದ ಫ್ರೀ ಫ್ಲೋ ಟೋಲಿಂಗ್ ಗೆ ಅವಕಾಶ ಕಲ್ಪಿಸಲು ಜಿಪಿಎಸ್ ಆಧಾರಿತ ಹೊಸ ತಂತ್ರಜ್ಞಾನ ಬಗ್ಗೆ ಸಲಹೆ ಪಡೆಯಲು ಸಚಿವಾಲಯ ಸಲಹೆಗಾರರನ್ನು ನೇಮಿಸಿದೆ. ಈ ಟೋಲಿಂಗ್ ವ್ಯವಸ್ಥೆ ಅಡಿ ಹೆದ್ದಾರಿಯಲ್ಲಿ ವಾಹನ ಇರುವ ಜಾಗ ತಿಳಿಸುತ್ತದೆ. ಪ್ರಯಾಣಿಸಿದ ದೂರವನ್ನು ಆಧರಿಸಿ ಶುಲ್ಕ ನಿರ್ಧರಿಸಲಾಗುವುದು. ಫಾಸ್ಟ್ ಟ್ಯಾಗ್ ಗಳ ಜೊತೆಗೆ ಪ್ರಾಯೋಗಿಕವಾಗಿ ಈ ವ್ಯವಸ್ಥೆ ಪರಿಚಯಿಸಲಿದ್ದು, ಟೋಲ್ ಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲಿದೆ. ಹೆದ್ದಾರಿಗಳಲ್ಲಿ ಪ್ರಯಾಣಿಸುವ ನಿಖರವಾದ ದೂರಕ್ಕೆ ವಾಹನಗಳಿಗೆ ಟೋಲ್ ಶುಲ್ಕ ವಿಧಿಸಲಾಗುವುದು.