ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಬೈಕ್, ಆಟೋ, ಟ್ರಾಕ್ಟರ್ ಸೇರಿದಂತೆ ನಿಧಾನಗತಿಯ ವಾಹನಗಳ ಸಂಚಾರಕ್ಕೆ ಬ್ರೇಕ್ ಬೀಳಲಿದೆ. ಸದ್ಯದಲ್ಲೇ ಈ ಕುರಿತಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆದೇಶ ಹೊರಬೀಳಲಿದೆ.
ಅತಿ ವೇಗದ ವಾಹನಗಳ ಸಂಚಾರಕ್ಕಾಗಿ ಈ ಹೆದ್ದಾರಿ ನಿರ್ಮಾಣಗೊಂಡಿದ್ದು, ಎರಡೂ ಬದಿ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲವಾಗಿದ್ದ ಕಾರಣ ಬೈಕ್, ಆಟೋ, ಟ್ರ್ಯಾಕ್ಟರ್ ಮೊದಲಾದ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ವೇಗವಾಗಿ ಸಂಚರಿಸುವ ವಾಹನಗಳಿಂದ ಅಪಾಯವಾಗಬಹುದೆಂಬ ಹಿನ್ನೆಲೆಯಲ್ಲಿ ಇದೀಗ ನಿಧಾನಗತಿಯ ವಾಹನಗಳ ಸಂಚಾರ ನಿಷೇಧಿಸಲಾಗುತ್ತಿದೆ.
9,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ವೇಗ ಮಿತಿ ಪ್ರತಿ ಗಂಟೆಗೆ 120 ಕಿ.ಮೀ. ನಿಂದ 140 ಕಿ.ಮೀ. ಗಳಾಗಿದ್ದು, ಬೆಂಗಳೂರು – ಮೈಸೂರು ಉಭಯ ನಗರಗಳನ್ನು ಕೇವಲ 75 ನಿಮಿಷಗಳಲ್ಲಿ ತಲುಪಬಹುದಾಗಿದೆ. ಆರು ಪಥದ ಹೆದ್ದಾರಿ ಇದಾಗಿದ್ದು, ಎರಡು ಬದಿಯಲ್ಲಿ ಎರಡು ಲೈನ್ ಸರ್ವಿಸ್ ರಸ್ತೆ ಇದೆ.