ಬೆಂಗಳೂರು: ಬೆಂಗಳೂರು –ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ನಿರಂತರವಾಗಿ ಅಪಘಾತ ಸಂಭವಿಸುತ್ತಿದ್ದು, ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದೆ. ಇದಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ ಎನ್ನಲಾಗಿದ್ದು, ಎಕ್ಸ್ ಪ್ರೆಸ್ ವೇ ಸಮಸ್ಯೆ ಬಗೆಹರಿಸುವಂತೆ ಭಾರಿ ಒತ್ತಾಯ ಕೇಳಿಬಂದಿದೆ.
ಅವೈಜ್ಞಾನಿಕ ಕಾಮಗಾರಿ ಪತ್ತೆಗಾಗಿ ತಾಂತ್ರಿಕ ತಂಡ ರಚಿಸಲು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರು -ಮೈಸೂರು ಎಕ್ಸ್ ಪ್ರೆಸ್ ಹೈವೇ ಸಮಸ್ಯೆ ಬಗ್ಗೆ ವಿಧಾನಸೌಧದಲ್ಲಿ ಜನಪ್ರತಿನಿಧಿಗಳು, ಎನ್.ಹೆಚ್.ಎ.ಐ. ಅಧಿಕಾರಿಗಳ ಸಭೆ ನಡೆಸಲಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಅವೈಜ್ಞಾನಿಕ ಕಾಮಗಾರಿ ಪತ್ತೆಗಾಗಿ ತಾಂತ್ರಿಕ ತಂಡ ರಚಿಸಲು ತೀರ್ಮಾನಿಸಲಾಗಿದೆ.
ಸಮಸ್ಯೆಗಳ ಸರಮಾಲೆಯನ್ನೇ ಶಾಸಕರು, ಜನಪ್ರತಿನಿಧಿಗಳು ಬಿಚ್ಚಿಟ್ಟಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ 150 ಜನರು ಸಾವನ್ನಪ್ಪಿದ್ದಾರೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದೇ ಇದಕ್ಕೆ ಕಾರಣ. ಪ್ರತಿದಿನ ಅಪಘಾತದಲ್ಲಿ ಜನ ಸಾವನ್ನಪ್ಪುತ್ತಿದ್ದಾರೆ. ಇದು ಎಕ್ಸ್ ಪ್ರೆಸ್ ವೇ ಅಲ್ಲ, ಸಾವಿನ ಹೆದ್ದಾರಿಯಾಗಿದೆ. ಕೂಡಲೇ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆನ್ನಲಾಗಿದೆ.