
ಬೆಂಗಳೂರು: ಬಾರ್ ನಲ್ಲಿ ಮದ್ಯ ಸೇವಿಸುವವಾಗಲೇ ರೌಡಿಶೀಟರ್ ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕದ ಕೊಡಗಿ ತಿರುಮಲಪುರ ನಿವಾಸಿ ಜಯರಾಮ್(42) ಹತ್ಯೆಯಾದ ರೌಡಿಶೀಟರ್. ಮಂಗಳವಾರ ರಾತ್ರಿ 9:30ರ ಸುಮಾರಿಗೆ ಹೆಸರುಘಟ್ಟ ರಸ್ತೆಯ ತಿರುಮಲಪುರ ವಿಲೇಜ್ ನ ಸಾಯಿ ಬಾರ್ ನಲ್ಲಿ ಘಟನೆ ನಡೆದಿದೆ.
ಜಯರಾಮ್ ಮೇಲೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಜಯರಾಮ್ ಯಲಹಂಕ ಉಪನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಕೊಲೆ, ದರೋಡೆ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿವೆ.
ಪ್ರಸ್ತುತ ಕೊಡಗಿ ತಿರುಮಲಪುರದಲ್ಲಿ ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದ ಜಯರಾಮ್ ಕೋಳಿ ಅಂಗಡಿ ನಡೆಸುತ್ತಿದ್ದ. ಮಂಗಳವಾರ ಮದ್ಯ ಸೇವಿಸಲು ಬಾರ್ ಗೆ ಬಂದಾಗ ನಾಲ್ಕೈದು ಜನ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದ ಶಂಕೆ ವ್ಯಕ್ತವಾಗಿದೆ. ಸೋಲದೇವನಹಳ್ಳಿ ಠಾಣೆ ಪೋಲೀಸರು ಕೊಲೆ ಪ್ರಕರಣ ದಾಖಲೆಸಿಕೊಂಡು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.