
ಬೆಂಗಳೂರು: ಮನೆಯೊಂದರಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ವಿನಾಯಕ ನಗರದಲ್ಲಿ ಘಟನೆ ನಡೆದಿದೆ.
ವಿಜಯಪುರ ಮೂಲದ 24 ವರ್ಷದ ಪವಿತ್ರಾ ಕೊಲೆಯಾದವರು. ಕೊಲೆ ಮಾಡಿ ಶವವನ್ನು ಬೆಡ್ ಶೀಟ್ ನಲ್ಲಿ ಸುತ್ತಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪವಿತ್ರಾ ಪತಿಯೇ ಕೊಲೆಗೈದು ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಮೂರು ವರ್ಷಗಳಿಂದ ಖಾಸಗಿ ಕಂಪೆನಿಯಲ್ಲಿ ಪವಿತ್ರಾ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೂರು ದಿನಗಳ ಹಿಂದೆಯೇ ಪವಿತ್ರಾ ಕೊಲೆಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.