
ಬೆಳಗಾವಿ: ಬೆಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಬಸ್ ನಲ್ಲಿ 28 ಪ್ರಯಾಣಿಕರು ಇದ್ದರು. ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬಸ್ ಚಾಲಕ ಬಸ್ ನ್ನು ರಸ್ತೆ ಬದಿ ನಿಲ್ಲಿಸಿ ಎಲ್ಲಾ ಪ್ರಯಾಣಿಕರನ್ನು ಬಸ್ ನಿಂದ ಕೆಳಗಿಳಿಸಿದ್ದಾರೆ.
ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಬಸ್ ಆವರಿಸಿದ್ದು, ಇಡೀ ಬಸ್ ಸುಟ್ಟು ಕರಕಲಾಗಿದೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ.