ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ಭಾಷಾ ವೈವಿಧ್ಯತೆಯನ್ನು ದೇಶಕ್ಕೆ ಸಾರಿ ಹೇಳುತ್ತಿದೆ. ಯಾಕೆಂದರೆ ಉದ್ಯಾನ ನಗರಿಯೊಂದರಲ್ಲೇ 107 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ.
2011ರ ಜನಗಣತಿಯ ವಿಶ್ಲೇಷಣೆಯ ಪ್ರಕಾರ, ಬೆಂಗಳೂರಿನಲ್ಲಿ ಅತಿ ಹೆಚ್ಚು ಭಾಷೆಗಳನ್ನು ಮಾತನಾಡುವ ಭಾರತದ ಅಗ್ರ ಜಿಲ್ಲೆ ಎಂಬ ಖ್ಯಾತಿಗೆ ನಮ್ಮ ಸಿಲಿಕಾನ್ ಸಿಟಿ ಪಾತ್ರವಾಗಿದೆ.
107 ಭಾಷೆಗಳೊಂದಿಗೆ ಬೆಂಗಳೂರಿನಲ್ಲಿ 22 ನಿಗದಿಪಡಿಸಲಾದ ಹಾಗೂ ನಿಗದಿಪಡಿಸಲಾಗದ 84 ಭಾಷಾ ವೈವಿಧ್ಯತೆಯನ್ನು ಹೊಂದಿದೆ. ಬ್ರೂಕಿಂಗ್ಸ್ ಸಂಸ್ಥೆಯ ಅನಿವಾಸಿ ಹಿರಿಯ ಸಹವರ್ತಿ ಶಮಿಕಾ ರವಿ ಹಾಗೂ ಸಹಾಯಕ ಪ್ರಾಧ್ಯಾಪಕರಾದ ಮುಡಿತ್ ಕಪೂರ್ ಅವರು ಈ ವಿಶ್ಲೇಷಣೆಯನ್ನು ಕಂಡುಕೊಂಡಿದ್ದಾರೆ.
ಇನ್ನು ನಗರದ ಜನಸಂಖ್ಯೆಯ ಆಧಾರದ ಮೇಲೆ ಶೇ.44.62 ರಷ್ಟು ಜನ ಮಾತೃಭಾಷೆಯಾಗಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ. ಕನ್ನಡದ ಜೊತೆ ನಿಗದಿಪಡಿಸಲಾದ ಭಾಷೆಗಳ ಪೈಕಿ, ಹಿಂದಿ, ಮೈಥಿಲಿ, ಮಲಯಾಳಂ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಕಾಶ್ಮೀರಿ, ಸಿಂಧಿ, ಉರ್ದು, ಕೊಂಕಣಿ, ಸಂತಾಲಿ, ಮರಾಠಿ, ಮಣಿಪುರಿ ಹಾಗೂ ನೇಪಾಳಿ ಭಾಷೆ ಹಂಚಿಕೊಂಡಿವೆ.
ನಿಗದಿಪಡಿಸಲಾಗದ ಭಾಷೆಗಳಲ್ಲಿ ಇಂಗ್ಲೀಷ್, ಕಾಬುಲಿ, ಪಾಷ್ಟೋ, ಟಿಬಿಟಿಯನ್, ಅರೇಬಿಕ್, ನಿಶಿ, ಮುಂಡಾರಿ, ಲುಶಾಯ್, ನಿಕೋಬಾರೀಸ್, ಶೆರ್ಪಾ, ನಾಗಾಲ್ಯಾಂಡ್ ನ ಭಾಷೆಗಳು ಸೇರಿವೆ.
100ಕ್ಕೂ ಹೆಚ್ಚು ಭಾಷೆಗಳನ್ನು ಮಾತನಾಡುವ ಇತರ ಜಿಲ್ಲೆಗಳೆಂದರೆ 103 ಭಾಷೆಗಳನ್ನು ಮಾತನಾಡುವ ನಾಗಾಲ್ಯಾಂಡ್ ನ ದಿಮಾಪುರ್ ಹಾಗೂ 101 ಭಾಷೆಗಳನ್ನು ಹೊಂದಿರುವ ಅಸ್ಸಾಂನ ಸೋನಿತ್ ಪುರ ಸೇರಿದೆ.
ಇನ್ನು ಕಡಿಮೆ ವೈವಿಧ್ಯಮಯ ಜಿಲ್ಲೆಗಳಾದ ಪುದುಚೇರಿಯ ಯಾನಂ, ಬಿಹಾರದ ಕೈಮೂರ್, ಕೌಶಂಬಿ ಹಾಗೂ ಉತ್ತರ ಪ್ರದೇಶದ ಕಾನ್ಪುರ್ ಡೆಹಾಟ್ ಮತ್ತು ತಮಿಳುನಾಡಿನ ಅರಿಯಲೂರು ಸೇರಿವೆ. ಈ ಜಿಲ್ಲೆಗಳಲ್ಲಿ 20ಕ್ಕಿಂತ ಕಡಿಮೆ ಭಾಷೆಗಳನ್ನು ಮಾತನಾಡಲಾಗುತ್ತದೆ.