ವಿಶೇಷ ಅಭಿಯಾನವೊಂದರಲ್ಲಿ 10,000 ಸಸಿಗಳನ್ನು ನೆಡಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ (ಬಿಎಂಆರ್‌ಸಿಎಲ್) ಮುಂದಾಗಿದೆ. ಈ ಅಭಿಯಾನಕ್ಕೆ ಸಚಿವ ನಾರಾಯಣ ಗೌಡ ಚಾಲನೆ ನೀಡಿದ್ದಾರೆ.
ರಾಜ್ಯ ಯುವಶಕ್ತಿ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಜೊತೆಗೆ ಈ ಅಭಿಯಾನವನ್ನು 75ನೇ ಸ್ವಾತಂತ್ರ‍್ಯೋತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ.
ಇದಕ್ಕೂ ಮುನ್ನ ಮೆಟ್ರೋ ಕಾಮಗಾರಿಗೆಂದು 348 ಮರಗಳನ್ನು ಕಡಿಯಲು/ಬೇರೆಡೆ ಸ್ಥಳಾಂತರಿಸಲು ಹೈಕೋರ್ಟ್ ಅನುಮತಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಹೆಬ್ಬಾಳದಲ್ಲಿರುವ ಹಳೆ ಮಿಲಿಟರಿ ಫಾರಂನಲ್ಲಿ 4000 ಸಸಿಗಳನ್ನು ನೆಡುವುದಾಗಿ ತಿಳಿಸಿದ ಬಳಿಕ ಈ ಅನುಮತಿಯನ್ನು ಹೈಕೋರ್ಟ್ ನೀಡಿತ್ತು. ಇದೀಗ 4,000 ಸಸಿಗಳ ಬದಲಿಗೆ 10,000 ಸಸಿಗಳನ್ನು ನೆಡಲು ಬಿಎಂಆರ್‌ಸಿಎಲ್ ಮುಂದಾಗಿದೆ.
ಪತ್ನಿ ಪರಾರಿಯಾಗಿದ್ದಕ್ಕೆ ಅಳಿಯನಿಂದ ಆಘಾತಕಾರಿ ಕೃತ್ಯ: ತವರಿನವರ ಬೆದರಿಸಿ ಕುದಿಯುವ ಎಣ್ಣೆಗೆ ಕೈಹಾಕಿಸಿದ ಕಿಡಿಗೇಡಿ
ಇದರ ಬೆನ್ನಿಗೆ, ಕಡಿಯಲಾಗುವ ಮರಗಳ ಬದಲಿಗೆ ಎಷ್ಟು ಸಸಿಗಳನ್ನು ನೆಡಲಾಗುವುದು ಹಾಗೂ ಎಲ್ಲಿ ನೆಡಲಾಗುವುದು ಎಂದು ತಿಳಿಸಲು ಅರಣ್ಯ ಉಪಸಂರಕ್ಷಕರಿಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ಼್, “ಇದೊಂದು ಜನತೆಯ ಅಭಿಯಾನವಾಗಲಿದೆ” ಎಂದಿದ್ದರು. ಸಸಿಗಳನ್ನು ನೆಡಲು ಜಾಗ ಗುರುತಿಸಿದ್ದು, ಈ ಅಭಿಯಾನವನ್ನು ಹಮ್ಮಿಕೊಳ್ಳಲು ಸಾರ್ವಜನಿಕರು, ಎನ್‌ಜಿಓಗಳು ಹಾಗೂ ಸಂಘಟನೆಗಳು ಮುಂದೆ ಬರಬೇಕಿದೆ ಎಂದು ಅಂಜುಂ ತಿಳಿಸಿದ್ದರು.