ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ದಾಖಲೆಯ ಮಳೆ ಸುರಿದ ಪರಿಣಾಮ ಆದ ಅನಾಹುತಗಳ ವಿಡಿಯೋ ಹಾಗೂ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮನೆಗಳ ಮೊದಲ ಅಂತಸ್ತಿನವರೆಗೂ ಕೆಲವೆಡೆ ನೀರು ನುಗ್ಗಿದ್ದು, ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಈಜಾಡಿದ ಘಟನೆಯ ವಿಡಿಯೋ ವೈರಲ್ ಆಗಿತ್ತು.
ಅಲ್ಲದೆ ಮನೆಯಿಂದ ಕಚೇರಿಗೆ ತೆರಳಲು ಒಂದಷ್ಟು ಮಂದಿ ಟ್ರ್ಯಾಕ್ಟರ್ ಬಳಸಿದ್ದರೆ, ಇನ್ನು ಮನೆಗಳೊಳಗೆ ಸಿಲುಕಿಕೊಂಡವರು ಏಣಿ ಮೂಲಕ ಹೊರ ಬಂದಿದ್ದರು. ಅಲ್ಲದೆ ರಸ್ತೆಗಳಲ್ಲಿ ಸಮುದ್ರದ ಅಲೆಗಳಂತೆ ನೀರು ಅಪ್ಪಳಿಸುತ್ತಿದ್ದ ದೃಶ್ಯಾವಳಿಯ ವಿಡಿಯೋ ಸಹ ಹರಿದಾಡಿತ್ತು. ಇದೀಗ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದರಲ್ಲಿ ಯುವಕನೊಬ್ಬ ಕಾಫಿ ಶಾಪ್ ಗೆ ತನ್ನ ಡೆಸ್ಕ್ ಟಾಪ್ ಎತ್ತುಕೊಂಡು ಬಂದಿದ್ದು, ಅಲ್ಲಿಯೇ ತನ್ನ ಕಚೇರಿ ಕೆಲಸ ಮಾಡುತ್ತಿದ್ದಾನೆ. ಇದೇ ರೀತಿ ಕೆಲವರು ಲ್ಯಾಪ್ಟಾಪ್ ನಲ್ಲಿ ಕೆಲಸ ಮಾಡುತ್ತಿರುವುದು ಸಹ ಫೋಟೋದಲ್ಲಿ ಕಂಡು ಬರುತ್ತದೆ. ಕಚೇರಿಯೊಳಗೆ ನೀರು ನುಗ್ಗಿದ ಪರಿಣಾಮ ಯುವಕ ಕಾಫಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಈ ಫೋಟೋದಲ್ಲಿ ತಿಳಿಸಲಾಗಿದೆ.
ಆದರೆ ಕೆಲವರು ಈ ಫೋಟೋಗೆ ಅಪಸ್ವರ ಎತ್ತಿದ್ದು, ಡೆಸ್ಕ್ ಟಾಪ್ ಎತ್ತಿಕೊಂಡು ಬರಲು ಸಾಧ್ಯವಾಗಿದ್ದರೆ ಅದು ಹೇಗೆ ನೀರು ತುಂಬಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಬೆಂಗಳೂರಿನ ಆ ಮಳೆಗೆ ಬೇಸತ್ತು ಇಲ್ಲಿ ಬಂದಿರಬಹುದು ಎಂದಿದ್ದಾರೆ.