ದೇಶದಲ್ಲಿರುವ ತೆರಿಗೆ ವ್ಯವಸ್ಥೆಯ ಬಗ್ಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. ನೆಟ್ಟಿಗರು ಕೂಡ ಈ ವ್ಯಕ್ತಿಗೆ ಆಗಿರುವ ನೋವು ನಮಗೂ ಆಗ್ತಿದೆ ಎಂದು ಹೇಳಿದ್ದಾರೆ. ಸರ್ಕಾರಕ್ಕೆ ಹಣ ನೀಡಲು ನಾವು ದುಡಿಯುತ್ತಿದ್ದೇವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಫ್ಲಿಪ್ಕಾರ್ಟ್ ಕ್ಯಾಟಗರಿ ಮ್ಯಾನೇಜರ್ ಆಗಿರುವ ಸಂಚಿತ್ ಗೋಯಲ್, ಇಂದು ನಾನು 5000 ರೂಪಾಯಿ ಸಂಪಾದಿಸಿದ್ದೇನೆ. ನಾನು ಸರ್ಕಾರಕ್ಕೆ ಇದರಲ್ಲಿ 30 ಪ್ರತಿಶತ ಹಣವನ್ನು ತೆರಿಗೆಯ ರೂಪದಲ್ಲಿ ನೀಡಬೇಕು. ಇನ್ನು ಇದೇ ಹಣದಲ್ಲಿ ತಂಪು ಪಾನೀಯ ಖರೀದಿ ಮಾಡೋಣ ಎಂದು ಯೋಚಿಸಿದೆ. ಆದರೆ ಇದರಲ್ಲಿ 28 ಪ್ರತಿಶತ ಹಣವನ್ನು ಮತ್ತೆ ತೆರಿಗೆ ರೂಪದಲ್ಲಿ ಸರ್ಕಾರಕ್ಕೇ ನೀಡಬೇಕು. ಅಲ್ಲಿಗೆ ನನ್ನ ಆದಾಯದಲ್ಲಿ ಶೇಕಡಾ 50ರಷ್ಟು ಹಣವನ್ನು ನಾನು ಸರ್ಕಾರಕ್ಕೆ ನೀಡಬೇಕು. ನಾನು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಿ ಅದರಲ್ಲಿ 50 ಪ್ರತಿಶತ ಹಣವನ್ನು ಸರ್ಕಾರಕ್ಕೆ ನೀಡಬೇಕೇ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನೊಂದು ಟ್ವೀಟ್ ಮಾಡಿರುವ ಸಂಚಿತ್, ಸಕ್ಕರೆ , ಕ್ರೀಮ್ ಹಾಗೂ ಐಸ್ ಕ್ರೀಂನಂತಹ ದೈನಂದಿನ ವಸ್ತುಗಳ ಮೇಲೆ ಸರ್ಕಾರ ವಿಧಿಸಿರುವ ತೆರಿಗೆಯ ಬಗ್ಗೆಯೂ ಮಾತನಾಡಿದ್ದಾರೆ. ಈ ಟ್ವೀಟ್ಗೆ ನೆಟ್ಟಿಗರು ತ್ವರಿತ ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಧ್ಯಮ ವರ್ಗದ ಜನರ ನಿತ್ಯದ ಸಂಕಷ್ಟವಾಗಿದೆ. ನಾವು ತೆರಿಗೆ ಪಾವತಿಸಲು ಕೆಲಸ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನುಳಿದಂತೆ ಉತ್ಪಾದನೆ, ಸಾಗಾಣಿಕೆ, ಉದ್ಯೋಗಿಗಳ ತೆರಿಗೆ, ಇಂಧನದ ಮೇಲಿನ ತೆರಿಗೆ ಇವೆಲ್ಲವನ್ನು ಲೆಕ್ಕ ಹಾಕಿದರೆ ಈ ತೆರಿಗೆಯ ಮೊತ್ತ ಇನ್ನಷ್ಟು ಹೆಚ್ಚಾಗುತ್ತದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.