ಬೆಂಗಳೂರು: ಬೆಂಗಳೂರಿನ ಅರುಣ್ ಕುಮಾರ್ ಕೋರೋತ್ ಎಂಬುವರು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಅವರಿಗೆ ಅಬುಧಾಬಿಯ ಬಿಗ್ ಟಿಕೆಟ್ ಲಾಟರಿ ಸ್ಪರ್ಧೆಯಲ್ಲಿ 44.61 ಕೋಟಿ ರೂಪಾಯಿ ಬಹುಮಾನ ಬಂದಿದೆ.
ಅರುಣ್ ಕುಮಾರ್ ಅವರಿಗೆ ಲಾಟರಿಯಲ್ಲಿ ಬಹುಮಾನ ಬಂದ ಬಗ್ಗೆ ತಿಳಿಸಲು ಬಿಗ್ ಟಿಕೆಟ್ ಲಾಟರಿ ಡ್ರಾ ಸ್ಪರ್ಧೆಯ ನಿರೂಪಕರು ಕರೆ ಮಾಡಿದ್ದಾರೆ. ಆದರೆ ಅವರು ಸೈಬರ್ ವಂಚಕರ ಕರೆ ಇದಾಗಿರಬಹುದು ಎಂದು ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ. ಬಳಿಕ ಬಿಗ್ ಟಿಕೇಟ್ ಪ್ರತಿನಿಧಿಗಳು ಕರೆ ಮಾಡಿ ಬಹುಮಾನ ಬಂದ ವಿಚಾರ ತಿಳಿಸಿದ್ದಾರೆ. ಮೊದಲಿಗೆ ಇದನ್ನು ನಂಬದ ಅರುಣ್ ಕುಮಾರ್ ತಮಾಷೆಗೆ ಮಾಡಿರುವ ಕರೆ ಎಂದು ಭಾವಿಸಿದ್ದಾರೆ.
ಅರುಣ್ ಕುಮಾರ್ ಮಾರ್ಚ್ 22 ರಂದು ಆನ್ಲೈನ್ ನಲ್ಲಿ ಬಿಗ್ ಟಿಕೆಟ್ ಲಾಟರಿ ಟಿಕೆಟ್ ಖರೀದಿಸಿದ್ದರು. ಎರಡು ಟಿಕೆಟ್ ಖರೀದಿಸಿದರೆ ಒಂದು ಉಚಿತ ಆಯ್ಕೆ ಮೂಲಕ ಅವರು ಮೂರು ಟಿಕೆಟ್ ತೆಗೆದುಕೊಂಡಿದ್ದು, ಮೂರನೇ ಟಿಕೆಟ್ ಗೆ 44.61 ಕೋಟಿ ರೂಪಾಯಿಗೆ ಬಂಪರ್ ಬಹುಮಾನ ಬಂದಿದೆ. ನಾನು ಬಹುಮಾನ ಬಂದಿದೆ ಎಂದಾಗ ನಂಬಲಿಲ್ಲ ಅನುಮಾನದಲ್ಲಿ ಇದ್ದೇನೆ. ಲಾಟರಿಯಲ್ಲಿ ಬಂದ ಹಣದಲ್ಲಿ ವ್ಯಾಪಾರ ಆರಂಭಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಇದೇ ಲಾಟರಿಯ 2ನೇ ಬಹುಮಾನ ಬಹರೇನ್ ನಲ್ಲಿ ನೆಲೆಸಿರುವ ಸುರೇಶ್ ಮಥನ್ ಎಂಬುವರಿಗೆ 22.30 ಲಕ್ಷ ರೂಪಾಯಿ ಬಹುಮಾನ ಬಂದಿದೆ.