ಬೆಂಗಳೂರು: ಬೆಂಗಳೂರುನ ಮಾಲ್ ಗಳಿಗೆ ಶೀಘ್ರವೇ ಹೊಸ ನಿಯಮ ಜಾರಿಗೆ ಬರಲಿದ್ದು, ನಿಯಮ ಉಲ್ಲಂಘಿಸಿದರೆ ಮಾಲ್ ಪರವಾನಗಿಯೇ ರದ್ದಾಗಲಿದೆ.
ಇತ್ತೀಚೆಗಷ್ಟೇ ಜಿ.ಟಿ ಮಾಲ್ ನಲ್ಲಿ ಪಂಚೆ ಧರಿಸಿ ಬಂದ ರೈತ ಫಕೀರಪ್ಪ ಎಂಬುವವರನ್ನು ಒಳಗೆ ಬಿಡದ ಪ್ರಕರಣ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದ ಜಿ.ಟಿ ಮಾಲ್ ಗೆ ಬೀಗ ಹಾಕಲಾಗಿತ್ತು. ಇದೀಗ ಈ ಘಟನೆಯಿಂದ ಎಚ್ಚೆತ್ತ ಬಿಬಿಎಂಪಿ ಮಾಲ್ ಗಳಿಗೆ ಹೊಸ ಆದೇಶ ಹೊರಡಿಸಲು ಮುಂದಾಗಿದೆ.
ಈ ಬಗ್ಗೆ ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಮಾಹಿತಿ ನೀಡಿದ್ದು, ಶೀಘ್ರದಲ್ಲಿಯೇ ಬೆಂಗಳೂರಿನ ಎಲ್ಲಾ ಮಾಲ್ ಗಳಿಗೆ ಹೊಸ ನಿಯಮ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ. ಡಿಸಿಎಂ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಕೆಲ ನಿಯಮ ಸಿದ್ಧಪಡಿಸಿದ್ದು, ಇನ್ಮುಂದೆ ಮಾಲ್ ಗಳಲ್ಲಿ ಯಾವುದೇ ಜಾತಿ, ಧರ್ಮ, ಬಟ್ಟೆ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಇಂತಹ ತಾರತಮ್ಯ ಮಾಡಿದರೆ ಮಾಲ್ ಗಳ ಟ್ರೇಡ್ ಲೈಸೆನ್ಸ್ ರದ್ದು ಮಾಡಲಾಗುವುದು
ಯಾವುದೇ ವ್ಯಕ್ತಿಯ ಮಾಲ್ ಪ್ರವೇಶಕ್ಕೆ ಅವಕಾಶ ಕೊಡಬೇಕು. ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆ ತರಬಾರದು, ಕಾಲ ಕಾಲಕ್ಕೆ ಮಾಲ್ ಗಳು ಆಸ್ತಿ ತೆರಿಗೆ ಪಾವತಿಸಬೇಕು ಸೇರಿದಂತೆ ಹಲವು ನಿಯಮಗಳನ್ನು ಜಾರಿಗೆ ತರಲು ಪಾಲಿಕೆ ಸಿದ್ಧತೆ ನಡೆಸಿದೆ.