ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟಗಳು ಮತ್ತೆ ಸಿಡಿದೆದ್ದಿದ್ದು, ಸೆಪ್ಟೆಂಬರ್ 11 ರಂದು ಬೆಂಗಳೂರು ಮಹಾನಗರ ಬಂದ್ ಗೆ ಕರೆ ನೀಡಿದೆ.
ಹೌದು. ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಉಚಿತ ಬಸ್ ಸೇವೆ ನೀಡುತ್ತಿದ್ದು, ಇದರಿಂದ ಆರ್ಥಿಕವಾಗಿ ಕಂಗೆಟ್ಟಿರುವ ಖಾಸಗಿ ಬಸ್, ಆಟೋ, ಟ್ಯಾಕ್ಸಿ ಚಾಲಕರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸೆಪ್ಟೆಂಬರ್ 11 ರಂದು ಬೆಂಗಳೂರು ಮಹಾನಗರ ಬಂದ್ ಗೆ ಕರೆ ನೀಡಿದೆ. ಅಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್, ಸ್ಕೂಲ್ ಬಸ್ ಗಳನ್ನು ರಸ್ತೆಗೆ ಇಳಿಸದಿರಲು ಖಾಸಗಿ ಸಾರಿಗೆ ಒಕ್ಕೂಟ ನಿರ್ಧರಿಸಿದೆ. ಈ ಹಿನ್ನೆಲೆ ಸೆ.11 ರಂದು ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾರಿಗೆ ಒಕ್ಕೂಟಗಳ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ.
ತಮ್ಮ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ರಾಜ್ಯ ಸರ್ಕಾರಕ್ಕೆ ನೀಡಿದ್ದ ಹತ್ತು ದಿನಗಳ ಗಡುವು ಬುಧವಾರ ಅಂತ್ಯಗೊಂಡಿದೆ. ಈ ಬಾರಿಯ ಬಂದ್ ಹಿಂದೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ.
ಬಸ್ ಮಾಲೀಕರು ಹಾಗೂ ಕ್ಯಾಬ್ ಮತ್ತು ಆಟೋ ಚಾಲಕರು ಭಾರಿ ಸಾಲದ ಹೊರೆ ಹೊತ್ತಿದ್ದಾರೆ, ಸಾರ್ವಜನಿಕರಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ಆದರೆ, ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದ ಕಾರಣ ರಾಜ್ಯ ಸರ್ಕಾರಕ್ಕೆ ನಮ್ಮ ನೋವನ್ನು ತಿಳಿಸಲು ಬಂದ್ ಅನಿವಾರ್ಯವಾಗಿದೆ ಎಂದು ಫೆಡರೇಶನ್ನ ನಾಮನಿರ್ದೇಶಿತ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.