ಬೆಂಗಳೂರು: ಬೆಂಗಳೂರಿನ ವೈಯ್ಯಾಲಿ ಕಾವಲ್ ನಲ್ಲಿ ಮಹಿಳೆ ಮಹಾಲಕ್ಷ್ಮೀ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕ ಓಡಿಶಾದ ತನ್ನ ಸ್ವಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಸಾವಿಗೂ ಮುನ್ನ ಬರೆದಿಟ್ಟಿದ್ದ ಡೈರಿ ಹಾಗೂ ಲ್ಯಾಪ್ ಟಾಪ್ ಪೊಲೀಸರಿಗೆ ಪತ್ತೆಯಾಗಿದ್ದು, ಇದೀಗ ಡೈರಿಯಲ್ಲಿ ಮಹಾಲಕ್ಷ್ಮೀ ಹತ್ಯೆ ಬಗ್ಗೆ ಆತ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಮಹಾಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಮೃತದೇಹವನ್ನು 59 ತುಂಡುಗಳನ್ನಾಗಿ ಕತ್ತರಿಸಿ ಫ್ರಿಜ್ ನಲ್ಲಿಟ್ಟು ಪರಾರಿಯಾಗಿದ್ದ ಹಂತಕ ರಂಜನ್ ರಾಯ್, ಓಡಿಶಾದಲ್ಲಿ ತಲೆಮರೆಸಿಕೊಂಡಿದ್ದ. ಆತನ ಬಂಧನಕ್ಕಾಗಿ ಬೆಂಗಳೂರು ಪೊಲೀಸರು ಓಡಿಶಾಗೆ ತೆರಳುತ್ತಿದ್ದಂತೆ ರಂಜನ್ ರಾಯ್ ಭದ್ರಕ್ ಜಿಲ್ಲೆಯ ತನ್ನ ಸ್ವಗ್ರಾಮದಲ್ಲಿ ಸ್ಮಶಾನದ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದನು.
ಸಾವಿಗೂ ಮುನ್ನ ಆತ ಬರೆದಿಟ್ಟಿರುವ ಡೈರಿ ಹಾಗೂ ಲ್ಯಾಪ್ ಟಾಪ್ ಪತ್ತೆಯಾಗಿದೆ. ಡೈರಿಯಲ್ಲಿ ಮಹಾಲಕ್ಷ್ಮೀ ಹತ್ಯೆಗೆ ಕಾರಣವೇನು? ಎಂಬುದನ್ನು ಬರೆದಿದ್ದಾನೆ.
ವೈಯ್ಯಾಲಿ ಕಾವಲ್ ನ ಮಹಾಲಕ್ಷ್ಮೀ ಮನೆಗೆ ಅಂದು ತಾನು ತೆರಳಿದ್ದ ವೇಳೆ ವೈಯಕ್ತಿಕ ಕಾರಣಕ್ಕಾಗಿ ಮಹಾಲಕ್ಷ್ಮೀ ಹಾಗೂ ನನಗೂ ಜಗಳವಾಗಿತ್ತು. ಈ ವೇಳೆ ಮಹಾಲಕ್ಷ್ಮೀ ನನ್ನ ಮೇಲೆ ಹಲ್ಲೆ ನಡೆಸಿದ್ದಳು. ಇದೇ ಕೋಪದಲ್ಲಿ ಆಕೆಯನ್ನು ಕೊಲೆ ಮಾಡಿದ್ದೆ. ಕೊಲೆ ಬಳಿಕ ಆಕೆಯ ದೇಹವನ್ನು 59 ಪೀಸ್ ಗಳನ್ನಾಗಿ ತುಂಡರಿಸಿ ಫ್ರಿಜ್ ನಲ್ಲಿಟ್ಟಿದ್ದೆ ಎಂದು ಬರೆದಿದ್ದಾಗಿ ಭದ್ರಕ್ ಎಸ್ ಪಿ ವರುಣ್ ಗುಂಟುಪಲ್ಲಿ ತಿಳಿಸಿದ್ದಾರೆ.
ರಂಜನ್ ರಾಯ್ ಆತ್ಮಹತ್ಯೆ ಬಗ್ಗೆ ಧುಸರಿ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಾಲಕ್ಷ್ಮೀ ಹಂತಕನ ಬಂಧನಕ್ಕಾಗಿ ಓಡಿಶಾಗೆ ತೆರಳಿರುವ ಬೆಂಗಳೂರು ಪೊಲೀಸರು ವಾಪಾಸ್ ಆಗುತ್ತಿದ್ದಾರೆ ಎಂದು ತಿಳಿದುಬಂದಿದೆ.