ಬೆಂಗಳೂರು: ಎರಡು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ವಿಶೇಷ ತಹಸೀಲ್ದಾರ್ ಸೇರಿ ನಾಲ್ವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ವಿಶೇಷ ತಹಸೀಲ್ದಾರ್ ವಿ. ನಾಗರಾಜ್, ಪ್ರಥಮ ದರ್ಜೆ ಸಹಾಯಕಿ ಶಿಲ್ಪಾ, ಮ್ಯಾನೇಜರ್ ಮಂಜುನಾಥ, ಕಂಪ್ಯೂಟರ್ ಆಪರೇಟರ್ ಹೇಮಂತ್ ಬಂಧಿತರು. ಗುರುಪ್ರಸಾದ್ ಅವರು ಜಮೀನಿಗೆ ಸಂಬಂಧಿಸಿದಂತೆ ಆರ್.ಆರ್.ಟಿ. ಶಾಖೆಯಲ್ಲಿ ಪಹಣಿಯಲ್ಲಿನ ಕಲಂ 2 ಮತ್ತು 9 ತಾಳೆ ಮಾಡಿಸಲು ಬೆಂಗಳೂರು ದಕ್ಷಿಣ ತಾಲೂಕು ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸ ಮಾಡಲು ಆರೋಪಿಗಳು 2.50 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಗುರುಪ್ರಸಾದ್ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಬುಧವಾರ ಆರೋಪಿ ಹೇಮಂತ್ ಮೂಲಕ ಕಚೇರಿಯ ಹೊರಗೆ 2 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣದ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.