ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಬಾಡಿಗೆಗೆ ಸಿಗುವುದೇ ಕಷ್ಟ, ಸಿಕ್ಕರೂ ಸಹ ಮನೆ ಮಾಲೀಕರ ಕಿರಿಕಿರಿ ಕುರಿತೇ ಸಾಕಷ್ಟು ಸ್ಟೋರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತದೆ. ಇದರ ಜೊತೆಗೆ ಮನೆ ಬಾಡಿಗೆ ಕೊಟ್ಟ ಬಳಿಕ ಅದು ಮಾಡಬಾರದು, ಇದು ಮಾಡಬಾರದು ಎಂಬ ಕಂಡಿಷನ್ ಗಳ ದೊಡ್ಡಪಟ್ಟಿಯೇ ಇರುತ್ತದೆ. ಇದಲ್ಲದರ ಮಧ್ಯೆ ರೆಡ್ಡಿಟ್ ಬಳಕೆದಾರರೊಬ್ಬರು ತಮ್ಮ ಮನೆ ಮಾಲೀಕರ ಕುರಿತು ಹಾಕಿರುವ ‘ಪಾಸಿಟಿವ್’ ಪೋಸ್ಟ್ ಎಲ್ಲರ ಗಮನ ಸೆಳೆದಿದೆ.
ಈ ರೆಡ್ಡಿಟ್ ಬಳಕೆದಾರರ ಪೋಸ್ಟ್ ಪ್ರಕಾರ ಇವರು ಕಳೆದ ಐದು ವರ್ಷಗಳಿಂದ (ಅಂದರೆ 2018 ರಿಂದ) ಇದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರಂತೆ. ಈ 5 ವರ್ಷಗಳ ಅವಧಿಯಲ್ಲಿ ಇವರ ಮನೆ ಮಾಲೀಕ ಬಾಡಿಗೆ ಹೆಚ್ಚಳ ಕುರಿತು ಮಾತನ್ನೇ ಆಡಿಲ್ಲವಂತೆ. 2018 ರಲ್ಲಿ ಏನು ಬಾಡಿಗೆ ಪಾವತಿಸುತ್ತಿದ್ದರೋ ಅದೇ ಬಾಡಿಗೆಯನ್ನು ಈಗಲೂ ಕೊಡುತ್ತಿದ್ದಾರಂತೆ.
ಅಷ್ಟೇ ಅಲ್ಲ, ಇತ್ತೀಚೆಗೆ ಅವರ ಮನೆ ಮಾಲೀಕ ಪಾರ್ಸೆಲ್ ತೆಗೆದುಕೊಂಡು ಬಂದಿದ್ದು, ನೋಡಿದರೆ ತಮ್ಮ ಬಾಡಿಗೆದಾರರಿಗೆ ಆಹಾರ ತಂದಿದ್ದರಂತೆ. ಇದನ್ನು ನೋಡಿ ಬಾಡಿಗೆದಾರರ ಮೊಗದಲ್ಲಿ ಮಂದಹಾಸ ಮೂಡಿದ್ದು, ಈ ಪಾಸಿಟೀವ್ ಸ್ಟೋರಿ ಹಂಚಿಕೊಳ್ಳುವುದರ ಜೊತೆಗೆ ತಮ್ಮ 65 ವರ್ಷದ ಮನೆ ಮಾಲೀಕ ಸಮಯ ಸಿಕ್ಕಾಗಲೆಲ್ಲಾ ಹೇಗೆ ತಮ್ಮ ಪುತ್ರಿಯರು ಜೀವನದಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂಬ ಸಂಗತಿಯನ್ನು ಹೆಮ್ಮೆಯಿಂದ ಹೇಳುವುದನ್ನು ಸಹ ಪ್ರಸ್ತಾಪಿಸಿದ್ದಾರೆ. ನಿಮಗೂ ನಿಮ್ಮ ಮನೆ ಮಾಲೀಕರ ಕುರಿತು ಯಾವ ಅಭಿಪ್ರಾಯವಿದೆ ಎಂಬುದನ್ನು ಕಮೆಂಟ್ ನಲ್ಲಿ ಹಂಚಿಕೊಳ್ಳಿ.