ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶಾದ್ಯಂತ ಸಡಗರ-ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ರಾಮನಾಮ ಜಪ, ಸಂಕೀರ್ತನೆ, ಹನುಮಾನ್ ಚಾಲೀಸ ಪಠಣ…ಹೀಗೆ ಭಕ್ತಿಭಾವ ಮೇಳೈಸುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ರಾಮಜಪ ಆರಂಭವಾಗಿದೆ.
ಸಿಲಿಕಾನ್ ಸಿಟಿಯ ಹಲವೆಡೆಗಳಲ್ಲಿ ಮನೆ ಮನೆಗಳ ಗೋಡೆ ಗೋಡೆಗಳ ಮೇಲೆ ರಾಮನಾಮ ರಾರಾಜಿಸುತ್ತಿರುವುದು ವಿಶೇಷ. ಕೆಲ ರಾಮನ ಭಕ್ತರು ಮನೆ ಮನೆಗೆ ತೆರಳಿ ಒಪ್ಪಿಗೆ ಪಡೆದು ಮನೆ ಗೋಡೆಗಳ ಮೇಲೆ ‘ಜೈ ಶ್ರೀರಾಮ್’ ಎಂದು ಬರೆದು ಪಕ್ಕದಲ್ಲಿ ಹನುಮನ ಭವಚಿತ್ರವನ್ನು ಅಂಟಿಸಿದ್ದಾರೆ. ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಈಗ ರಾಮನಾಮ, ರಾಮ ಜಪ ಕೇಳಿಬರುತ್ತಿದೆ.
ಮನೆಗಳ ಗೋಡೆಗಳ ಮೇಲೆ ಸುಂದರವಾಗಿ ಮೂಡಿ ಬಂದಿರುವ ರಾಮನಾಮ ಜೊತೆಗೆ ಪಕ್ಕದಲ್ಲಿಯೇ ರಾರಾಜಿಸುತ್ತಿರುವ ಹನುಮನ ಚಿತ್ರ ಈ ಮೂಲಕ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಸಿಲಿಕಾನ್ ಸಿಟಿಯಲ್ಲಿ ರಾಮೋತ್ಸವ ಅಭಿಯಾನ ಆರಂಭವಾಗಿದೆ.
ರಾಮನ ಭಕ್ತೆ ಸುನಿತಾ ಹಾಗೂ ತಂಡದವರು ರಾಮ ಮಂದಿರ ಉದ್ಘಾಟನೆ ವೇಳೆ ನಮ್ಮದೊಂದು ಅಳಿಲು ಸೇವೆ ಎಂದು ನಗರದ ವೈಯಾಲಿಕಾವಲ್, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಮನೆಗಳ ಗೋಡೆಗಳಿಗೆ ಜೈಶ್ರೀರಾಮ್ ಹಾಗೂ ಹನುಮನ ಚಿತ್ರ ಬರೆಯುತ್ತಾ ವಿಶೇಷ ಸೇವೆ ಸಲ್ಲಿಸುತ್ತಿದ್ದಾರೆ.