ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಸ್ಟಾರ್ ಹೋಟೆಲ್ ಒಂದರ ಊಟದಲ್ಲಿ ಜಿರಳೆ ಪತ್ತೆಯಾಗಿದ್ದು, ಹೈಕೋರ್ಟ್ ವಕೀಲೆಯೊಬ್ಬರು ಹೋಟೆಲ್ ಸಿಬ್ಬಂದಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್ ಗೆ ವಕೀಲೆ ಶೀಲಾ ದೀಪಕ್ ಎಂಬುವವರು ಊಟಕ್ಕೆ ತೆರಳಿದ್ದರು. ಅವರು ಆರ್ಡರ್ ಮಾಡಿದ್ದ ಪನ್ನೀರ್ ಗ್ರೇವಿಯಲ್ಲಿ ಜಿರಳೆ ಪತ್ತೆಯಾಗಿದೆ. ಅದಾಗಲೇ ಅರ್ಧ ಊಟ ಮುಗಿಸಿದ್ದ ಶೀಲಾ, ಗ್ರೇವಿಯಲ್ಲಿದ್ದ ಜಿರಳೆ ಕಂಡು ಹೌಹಾರಿದ್ದಾರೆ.
ತಕ್ಷಣ ಮೊಬೈಲ್ ನಲ್ಲಿ ಇದನ್ನು ಸೆರೆ ಹಿಡಿದುದ್ದು, ಹೋಟೆಲ್ ಸಿಬ್ಬಂದಿಗಳನ್ನು ಕರೆದು ಹೇಳಿದ್ದಾರೆ. ಸಿಬ್ಬಂದಿಗಳು ಬೇರೆ ಊಟ ಕೊಡುವುದಾಗಿ ಹೇಳಿದ್ದಾರೆ. ಆದರೆ ಊಟ ನಿರಾಕರಿಸಿರುವ ವಕೀಲೆ ಶೀಲಾ, ಹೋಟೆಲ್ ಅಡುಗೆ, ಅಡುಗೆ ಮನೆಯಲ್ಲಿನ ಸ್ವಚ್ಛತೆ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೇ ಹೋಟೆಲ್ ನಲ್ಲಿ ಊಟ ತಯಾರಿಸುತ್ತಿದ್ದ ಸ್ಥಳಕ್ಕೆ ತೆರಳಿ ವಿಡಿಯೋ ಚಿತ್ರಣ ಮಾಡಿದ್ದು, ಶುಚಿತ್ವವಿಲ್ಲದಿರುವುದನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಊಟದಲ್ಲಿ ಜಿರಳೆ ಪತ್ತೆ ಕೇಸ್ ಸಂಬಂಧ ಇದೀಗ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್ ಸಿಬ್ಬಂದಿಗಳು ಸೂಕ್ತವಾಗಿ ಸ್ಪಂದಿಸಿಲ್ಲ. ಅಲ್ಲದೇ ತನ್ನನ್ನು ಎಳೆದಾಡಿ, ನೂಕಾಡಿ ಬೆದರಿಕೆ ಹಾಕಿದ್ದಾರೆ ಎಂದು ವಕೀಲೆ ಆರೋಪಿಸಿದ್ದು, ಐಪಿಸಿ ಸೆಕ್ಷನ್ 352, 341, 504,506 ಅಡಿ ಎಫ್ ಐ ಆರ್ ದಾಖಲಾಗಿದೆ.