ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಬಿಸಿಲ ಝಳ, ಇನ್ನೊಂದೆಡೆ ಕುಡಿಯುವ ನೀರಿಗೆ ಸಂಕಷ್ಟ ಈ ನಡುವೆ ಕುದುರೆಯೊಂದರಲ್ಲಿ ಮಾರಕ ರೋಗ ಪತ್ತೆಯಾಗಿದೆ.
ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಕುದುರೆಯೊಂದರಲ್ಲಿ ಮಾರಕ ಗ್ಲಾಂಡರ್ಸ್ ರೋಗ ದೃಢ ಪಟ್ಟಿದೆ. ಈ ಸೋಂಕು ಇತರ ಪ್ರಾಣಿಗಳಿಗೂ ಹರಡುವ ಭೀತಿ ಎದುರಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಡಿ.ಜೆ.ಹಳ್ಳಿ ಸುತ್ತಮುತ್ತ ರೋಗ ಪೀಡಿತ ವಲಯ ಎಂದು ಘೋಷಿಸಲಾಗಿದೆ.
ಪಶುಸಂಗೋಪನೆ ಹಾಗೂ ಹೈನುಗಾರಿಕಾ ಇಲಾಖೆ ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ 5 ಕಿ.ಮೀ ವ್ಯಾಪ್ತಿಯವರೆಗೆ ಗ್ಲಾಂಡರ್ಸ್ ರೋಗ ಪೀಡಿತ ವಲಯ ಹಾಗೂ 5ರಿಂದ 25 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿದೆ.
ಡಿ.ಜೆ.ಹಳ್ಳಿಯ ಖಲೀದ್ ಷರೀಫ್ ಬಿನ್ ಎ.ಜೆ.ಷರೀಫ್ ಎಂಬುವವರ ಕುದುರೆಯಲ್ಲಿ ಈ ರೋಗ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಘೋಷಿಸಿರುವ ವಲಯಗಳಲ್ಲಿ ಕುದುರೆ, ಕತ್ತೆ ಮತ್ತು ಹೇಸರಗತ್ತೆಗಳ ಚಲನವಲನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಗ್ಲಾಂಡರ್ಸ್ ರೋಗ ಒಂದು ಸಾಂಕ್ರಾಮಿಕ ಮತ್ತು ಮಾರಣಾಂತಿಕ ರೋಗವಾಗಿದೆ. ಇದು ಸಾಮಾನ್ಯವಾಗಿ ಕುದುರೆ, ಕತ್ತೆ, ಹೇಸರಗತ್ತೆಗಳಲ್ಲಿ ಕಂಡುಬರುತ್ತದೆ. ಬರ್ಖೋಲ್ಡೆರಿಯಾ ಮಲ್ಲಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಶ್ವಾಸನಾಳ, ಶ್ವಾಸಕೋಷಗಳಲ್ಲಿ ಗಂಟು, ಹುಣ್ಣು ಉಂಟುಮಾಡುತ್ತದೆ. ಈ ರೋಗ ಉಲ್ಬಣವಾದರೆ ಸಾವು ಸಂಭವಿಸುವ ಸಾಧ್ಯತೆ ಹೆಚ್ಚು.