ಬೆಂಗಳೂರು: ವಾಟ್ಸಪ್ ಚಾಟಿಂಗ್ ಮೂಲಕ ಯುವಕನಿಗೆ ಪರಿಚಯಗೊಂಡ ಯುವತಿ ಮನೆಯಲ್ಲಿ ಯಾರೂ ಇಲ್ಲವೆಂದು ಹೇಳಿ ಕರೆಸಿಕೊಂಡು ಖಾಸಗಿ ವಿಡಿಯೋ ಚಿತ್ರಣ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಿರುವ ಘಟನೆ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ.
ಪ್ರಿಯಾ ಎಂಬ ಯುವತಿಗೆ ದಿಲೀಪ್ ಕುಮಾರ್ ಎಂಬ ಯುವಕ ಸಿಕ್ಕಿಹಾಕಿಕೊಂಡಿದ್ದು, ಮನೆಯಲ್ಲಿ ಯಾರೂ ಇಲ್ಲ ಎಂದು ದಿಲೀಪ್ ನನ್ನು ಮನೆಗೆ ಕರೆದಿದ್ದಾಳೆ. ಆತ ಮನೆಗೆ ಬಂದ ಬಳಿಕ ಯುವತಿ ಜೊತೆ ಇನ್ನೂ ನಾಲ್ವರು ಹುಡುಗರ ಗ್ಯಾಂಗ್ ಇದ್ದು, ಯುವತಿಯೊಂದಿಗಿನ ದಿಲೀಪ್ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬಳಿಕ ಸುಲಿಗೆ ಮಾಡಿದ್ದಾರೆ.
ಅಲ್ಲದೇ ಯುವತಿಯ ಜೊತೆಗಿದ್ದ ಗ್ಯಾಂಗ್ ದಿಲೀಪ್ ಗೆ ಚಾಕು ಹಿಡಿದು ಹೆದರಿಸಿ ಆತನ ಬಳಿ ಇದ್ದ 25 ಸಾವಿರ ಹಣ, ಮೊಬೈಲ್, ಕಾರ್ ಕಿಯನ್ನು ಕಸಿದುಕೊಂಡಿದ್ದಾರೆ. ಕಾರ್ ಕಿ ವಾಪಸ್ ಕೊಡಬೇಕೆಂದರೆ 60 ಸಾವಿರ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಯುವತಿಯಿಂದ ವಂಚನೆಗೊಳಗಾದ ದಿಲೀಪ್ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಯುವತಿಯನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.