ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ವರುಣಾರ್ಭಟ ಜೋರಾಗಿದ್ದು, ಬಹುತೇಕ ರಸ್ತೆಗಳು ಹೊಳೆಯಂತಾಗಿವೆ. ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಮತ್ತೆ ಹಲವೆಡೆ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈ ನಡುವೆ ಮಲ್ಲೇಶ್ವರಂ ನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ಬೃಹತ್ ಮರವೊಂದು ಆಟೋ, ಬೈಕ್ ಗಳ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ರಸ್ತೆಯ ಇಕ್ಕೆಲೆಗಳಲ್ಲಿ ನಿಂತಿದ್ದ ಹಲವು ವಾಹನಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿಗಳು ದೌಡಾಯಿಸಿದ್ದು, ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರಿನ ಭಾಷ್ಯಂ ಸರ್ಕಲ್, ವಿಜಯನಗರ, ಮಲ್ಲೇಶ್ವರಂ, ರಾಜಾಜಿನಗರ, ಆರ್.ಆರ್.ನಗರ, ಕೆಂಗೇರಿ, ಮಾಗಡಿ ರಸ್ತೆ, ಮಂಜುನಾಥ ನಗರ, ದೇವನಹಳ್ಳಿ ಸುತ್ತಮುತ್ತ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಚರಂಡಿ, ಕಾಲುವೆಗಳ ನೀರು ರಸ್ತೆಗಳ ಮೇಲೆ ತುಂಬಿ ಹರಿಯುತ್ತಿವೆ.
ದೇವನಹಳ್ಳಿ ಏರ್ ಪೋರ್ಟ್ ಬಳಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಹದಂತೆ ನೀರು ಹರಿಯುತ್ತಿದೆ. ವಾಹನ ಸವಾರರು ಪರದಾಟ ನಡೆಸಿದ್ದಾರೆ.