ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆಯಿಂದ ತಣ್ಣಗಾಗಿದ್ದ ಮಳೆರಾಯ ಮತ್ತೆ ಅಬ್ಬರಿಸಿ ಬೊಬ್ಬಿರಿಯಲಾರಂಭಿಸಿದ್ದಾನೆ. ಬೆಂಗಳೂರಿನಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿದ್ದ ಮಳೆ ಬೆಳಿಗ್ಗೆ ಕೊಂಚ ಬಿಡುವು ಪಡೆದಿತ್ತು. ಮಧ್ಯಾಹ್ನ ಮೂರು ಗಂಟೆ ಬಳಿಕ ರಾಜಧಾನಿಯಲ್ಲಿ ಮತ್ತೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆ ರಸ್ತೆಗಳು ಜಲಾವೃತಗೊಂಡಿವೆ. ಮಳೆ ಅವಾಂತರ, ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಕಚೇರಿಗಳಿಂದ ಮನೆಗಳಿಗೆ ವಾಪಾಸ್ ಆಗುತ್ತಿದ್ದವರು ಹೈರಾಣಾಗಿದ್ದಾರೆ.
ವಿಧಾನಸೌಧ, ಮೆಜೆಸ್ಟಿಕ್, ಕೆ.ಆರ್. ಮಾರುಕಟ್ಟೆ, ಆರ್.ಆರ್.ನಗರ, ನಾಯಂಡಹಳ್ಳಿ, ಗಿರಿನಗರ, ಹೊಸಕೆರೆಹಳ್ಳಿ, ಮೈಸೂರು ರಸ್ತೆ, ಕೆಂಗೇರಿ, ವಿಜಯನಗರ, ರಾಜಾಜಿನಗರ, ದೀಪಾಂಜಲಿ ನಗರ, ಶಾಂತಿನಗರ, ಲಾಲ್ ಬಾಗ್, ರಿಚ್ ಮಂಡ್ ಸರ್ಕಲ್ ಸೇರಿದಂತೆ ಹಲವೆಡೆಗಳಲ್ಲಿ ಭಾರಿ ಮಳೆಯಾಗುತ್ತಿದೆ.
ವರುಣಾರ್ಭಟಕ್ಕೆ ಮತ್ತೆ ರಸ್ತೆಗಳು ತುಂಬಿ ಹರಿಯುತ್ತಿದ್ದು, ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೀಡಾಗಿದ್ದಾರೆ. ವಿವಿಧೆಡೆ ವಿದ್ಯುತ್ ಸ್ಥಗಿತಗೊಂಡಿದೆ. ಇನ್ನು ಕೆಲವೆಡೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಬೆಂಗಳೂರಿನಲ್ಲಿ ನಾಳೆಯೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.