ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದರೆ ಮತ್ತೊಂದೆಡೆ ಬಿಸಿಗಾಳಿಗೆ ಜನರು ಬಸವಳಿದುಹೋಗುತ್ತಿದ್ದಾರೆ. ಈ ನಡುವೆ ಹವಾಮಾನ ಇಲಾಖೆ ಬೆಂಗಳೂರಿಗರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಬೆಂಗಳೂರಿನಲ್ಲಿ ಇಂದಿನಿಂದ 5 ದಿನಗಳ ಕಾಲ ಬಿಸಿಗಾಳಿ ಹೆಚ್ಚಲಿದ್ದು, ಒಂದು ವಾರಗಳ ಕಾಲ ಜನರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಇಂದು ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬಿಸಿಲ ಝಳಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಇಂದಿನಿಂದ ಐದು ದಿನಗಳ ಕಾಲ ತಾಪಮಾನ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ನಾಳೆ ಬೆಂಗಳೂರಿನಲ್ಲಿ ಬರೋಬ್ಬರಿ 38 ಡಿಗ್ರಿ ಉಷ್ಣಾಂಶ ದಾಖಲಾಗಲಿದೆ. ರಾಜಧಾನಿಯ ಜನರು ಒಂದು ವಾರಗಳ ಕಾಲ ಜಾಗರೂಕರಾಗಿರುವಂತೆ ತಿಳಿಸಲಾಗಿದೆ. ರಣ ಬಿಸಿಲು, ಮಧ್ಯಾಹ್ನದ ಸಂದರ್ಭದಗಳಲ್ಲಿ ಹೊರಗಡೆ ತೆರಳುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ,ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.