ಬೆಂಗಳೂರು ರಸ್ತೆಗಳ ಕಥೆ ಎಲ್ಲರಿಗೂ ಗೊತ್ತು ಇಲ್ಲಿನ ರಸ್ತೆಗಳ ವ್ಯವಸ್ಥೆ ವಾಹನ ಸವಾರರನ್ನ ಬಲಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ವೈಟ್ ಫೀಲ್ಡ್ ನಲ್ಲಿ ನಡೆದ ಘಟನೆ ನಗರದಲ್ಲಿ ಎಂತಹ ರಸ್ತೆ ವ್ಯವಸ್ಥೆ ಇದೆ ಅನ್ನೋದಕ್ಕೆ ಕನ್ನಡಿ ಹಿಡಿದ ಹಾಗಾಗಿದೆ.
ವೈಟ್ ಫೀಲ್ಡ್ ರಸ್ತೆಯೊಂದರಲ್ಲಿ ಬರುತ್ತಿದ್ದ ಕ್ರೇನ್, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಹಿಂದಿನಿಂದ ಗುದ್ದಿದೆ. 19 ವರ್ಷದ ನೂರ್‌ಫಾತಿಮಾ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ನೂರ್ ಫಾತಿಮಾರನ್ನ ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವೈಟ್ ಫೀಲ್ಡ್ ಪೊಲೀಸರು ಕ್ರೇನ್ ಚಾಲಕನನ್ನ ಬಂಧಿಸಿದ್ದಾರೆ.
ಪೊಲೀಸರು ಕೊಟ್ಟ ಹೇಳಿಕೆ ಪ್ರಕಾರ, ಕ್ರೇನ್ ಚಾಲಕ ಪೆರಿಯಸ್ವಾಮಿ, ಸುಮಾರು 2 ಗಂಟೆ ಸುಮಾರಿಗೆ ವೈಟ್‌ಫೀಲ್ಡ್ ಬಳಿಯ ಕನ್ನಮಂಗಲ ರಸ್ತೆಯ ಬಳಿ ಬಂದಿದ್ದಾನೆ. ವೇಗವಾಗಿ ಕ್ರೇನ್ ಓಡಿಸಿಕೊಂಡು ಬರುತ್ತಿರುವಾಗಲೇ, ಅಲ್ಲೇ ನಡೆದುಕೊಂಡು ಹೋಗುತ್ತಿದ್ದ ನೂರ್‌ಫಾತಿಮಾಗೆ ಕ್ರೇನ್ ಹಿಂದಿನಿಂದ ಗುದ್ದಿದೆ. ಆಗ ಮುಂಭಾಗದ ಚಕ್ರಕ್ಕೆ ಫಾತಿಮಾ ಸಿಕ್ಕಾಕಿಕೊಂಡು ಮೃತಪಟ್ಟಿದ್ದಾಳೆ. ಈ ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದ ಕಾರಣ ಇಲ್ಲಿನ ರಸ್ತೆ ಪಕ್ಕದಲ್ಲಿ ನೀರು ನಿಂತುಕೊಂಡಿದ್ದರಿಂದ ಅಲ್ಲಿ ನಡೆದುಕೊ೦ಡು ಹೋಗಲು ಸಾಧ್ಯವಿರಲಿಲ್ಲ. ಅಲ್ಲದೇ ಅಲ್ಲಿ ಫುಟ್ ಪಾತ್ ವ್ಯವಸ್ಥೆ ಕೂಡ ಇರಲಿಲ್ಲ. ಆದ್ದರಿಂದ ಫಾತಿಮಾ ರಸ್ತೆಯಲ್ಲೇ ನಡೆದುಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ ವೇಗವಾಗಿ ಬಂದ ಕ್ರೇನ್ ಫಾತಿಮಾರಿಗೆ ಗುದ್ದಿದೆ. ಈಗ ಫಾತಿಮಾ ಸಾವಿಗೆ ನ್ಯಾಯ ಸಿಗಬೇಕು, ಹಾಳಾದ ರಸ್ತೆಗಳಿಗೆ ಇನ್ನಷ್ಟು ಅಮಾಯಕರು ಬಲಿಯಾಗಬೇಕು ಎಂದು ಕನ್ನಮಂಗಲ ನಿವಾಸಿಗಳು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
https://youtu.be/oy71oA4iZF8