ಬೆಂಗಳೂರು: ಗುಜರಾತ್ ನ ರಾಜ್ ಕೋಟ್ ನ ಗೇಮ್ ಝೋನ್ ನಲ್ಲಿ ಸಂಭವಿಸಿದ ಬೆಂಕಿ ದುರಂತ ಘಟನೆ ಬೆನ್ನಲ್ಲೇ ಬಿಬಿಎಂಪಿ ಅಲರ್ಟ್ ಆಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಬೆಂಗಳೂರಿನಲ್ಲಿರುವ ಗೇಮ್ ಝೋನ್ ಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರಿನ ಗೇಮ್ ಝೋನ್ ಗಳು ಮಾತ್ರವಲ್ಲ ಚಿತ್ರಮಂದಿರ, ಸ್ಟಾರ್ ಹೋಟೆಲ್, ಪಬ್, ರೆಸ್ಟೋರೆಂಟ್, ಸೂಪರ್ ಮಾರ್ಕೆಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿಯೂ ಸುರಕ್ಷತಾ ಕ್ರಮ ಅಳವಡಿಕೆ ನೀಟ್ಟಿನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಗೇಮ್ ಝೋನ್ ಸುರಕ್ಷತೆ ಪರಿಶೀಲಿಸಲು ಬಿಬಿಎಂಪಿ ಪ್ರತ್ಯೇಕ ತಂಡ ರಚನೆ ಮಾಡಿದ್ದು, ನಗರದ ಹಲವೆಡೆ ಭೇಟಿ ನೀಡಿ ಪರಿಸೀಲನೆ ನಡೆಸಿದ್ದಾರೆ. ಸದ್ಯ ಪರಿಶೀಲನೆ ವೇಳೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಮೂರು ಗೇಮ್ ಝೋನ್ ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಸದ್ಯ 29 ಗೇಮ್ ಝೋನ್ ಗಳಿವೆ. ಅವುಗಳಲ್ಲಿ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ ಎಂಬುದನ್ನು ಪಾಲಿಕೆ ಅಧಿಕಾರಿಗಳು ಪರಿಶೀಲಿಸಲು ಸಿದ್ಧತೆ ನಡೆಸಿದ್ದಾರೆ.