ಬೆಂಗಳೂರಿನ ಚಿಕ್ಕದೇವನಹಳ್ಳಿಯಲ್ಲಿ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಭಾರಿ ಬೆಂಕಿ ದುರಂತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
59 ವರ್ಷದ ಭಾಗ್ಯರೇಖಾ ಹಾಗೂ ಅವರ ತಾಯಿ ಲಕ್ಷ್ಮಿದೇವಿ(82) ಮೃತಪಟ್ಟವರು ಎಂದು ಹೇಳಲಾಗಿದೆ. 210 ನೇ ಫ್ಲ್ಯಾಟ್ ನಲ್ಲಿ ಇವರು ವಾಸವಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದೆ. ಬಾಲ್ಕನಿಯಲ್ಲಿಯಲ್ಲಿದ್ದರೂ ಲಕ್ಷ್ಮಿದೇವಮ್ಮ ಹೊರಗೆ ಬರಲು ಸಾಧ್ಯವಾಗಲಿಲ್ಲ. ಕಬ್ಬಿಣದ ಗ್ರಿಲ್ ಅಳವಡಿಸಿದ್ದರಿಂದ ಹೊರಗೆ ಬರಲು ಆಗದೇ ಜನರ ಕಣ್ಣೆದುರಲ್ಲೇ ಅವರು ಜೀವಂತದಹನವಾಗಿದ್ದಾರೆ.
ಇಬ್ಬರ ಮೃತದೇಹಗಳು ಸುಟ್ಟುಕರಕಲಾಗಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
5 ಅಗ್ನಿಶಾಮಕದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆದಿದ್ದು, ಮತ್ತೊಂದು ಕಡೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ದಟ್ಟವಾದ ಹೊಗೆ ಆವರಿಸಿರುವುದರಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಘಟನಾ ಸ್ಥಳದಲ್ಲಿ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಹೇಳಿದ್ದಾರೆ.