ಬೆಂಗಳೂರಲ್ಲಿ ದಿನೇ ದಿನೇ ಚಳಿ ಜಾಸ್ತಿಯಾಗ್ತಿದೆ. ಡಿಸೆಂಬರ್ ತಿಂಗಳು ಆರಂಭವಾದಾಗಿನಿಂದ ಮುಂಜಾನೆ ಮಂಜಿನ ವಾತಾವರಣ ಇದೆ. ಮುಂಬರುವ ದಿನಗಳಲ್ಲಿ ಚಳಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಕಳೆದೊಂದು ದಿನದಲ್ಲೇ ನಗರದಲ್ಲಿ ಉಷ್ಣಾಂಶ ಗರಿಷ್ಠ 2 ಡಿಗ್ರಿ ಸೆಲ್ಸಿಯಸ್ ಇಳಿದಿದೆ. ಭಾನುವಾರ 27.3 ಡಿಗ್ರಿ ಸೆಲ್ಸಿಯಸ್ ಇದ್ದ ಉಷ್ಣಾಂಶ ಸೋಮವಾರ 25 ಡಿಗ್ರಿ ಸೆಲ್ಸಿಯಸ್ ಗೆ ಇಳಿಯಿತು.
ಭಾರತೀಯ ಹಮಾವಾನ ಇಲಾಖೆ ಬೆಂಗಳೂರಲ್ಲಿ ಮಂಗಳವಾರ ಮೋಡದ ವಾತಾವರಣವಿದ್ದು ಉಷ್ಣಾಂಶ 25 ಡಿಗ್ರಿ ಇರಲಿದೆ ಎಂದು ತಿಳಿಸಿತ್ತು. ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ಉಷ್ಣಾಂಶ ಗರಿಷ್ಠ 1 ರಿಂದ 2 ಡಿಗ್ರಿ ಸೆಲ್ಸಿಯಲ್ ಕಡಿಮೆಯಾಗುವ ನಿರೀಕ್ಷೆಯಿದೆ. ಅಂದರೆ ಮುಂದಿನ ದಿನಗಳಲ್ಲಿ ನಗರದಲ್ಲಿ ಮತ್ತಷ್ಟು ಚಳಿ ಹೆಚ್ಚಾಗಲಿದೆ. ನಗರದಲ್ಲಿ ಸರಾಸರಿ ಗರಿಷ್ಠ 26.9 ಮತ್ತು ಕನಿಷ್ಠ 16.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಡಿಸೆಂಬರ್ 22 ರಿಂದ ರಾತ್ರಿ ವೇಳೆ ನಗರದಲ್ಲಿ 16 ಡಿಗ್ರಿ ಉಷ್ಣಾಂಶವಿರಲಿದ್ದು ಕ್ರಿಸ್ ಮಸ್ ವೇಳೆಗೆ ಇದು 15 ಡಿಗ್ರಿಗೆ ಇಳಿಯಬಹುದು. ಅದಾಗ್ಯೂ ಡಿಸೆಂಬರ್ 22 ರಿಂದ ಹಗಲು ವೇಳೆ ಉಷ್ಣಾಂಶ 25 ರಿಂದ 27 ಡಿಗ್ರಿ ಸೆಲ್ಸಿಯಸ್ ಗೆ ಏರುವ ಸಾಧ್ಯತೆ ಇದೆ.
ಐಎಂಡಿ ಪ್ರಕಾರ ಹೆಚ್ಚಿನ ಚಳಿಯು ಗಾಳಿಯ ಮೇಲ್ಮುಖ ಚಲನೆಯಿಂದ ಉಂಟಾಗಲಿದೆ. ಇದು ಹೆಚ್ಚಿನ ಚಳಿಯನ್ನೇನೂ ಉಂಟುಮಾಡದೇ ಮೋಡ ಕವಿದ ವಾತಾವರಣ ಸೃಷ್ಟಿಸಲಿದೆ. ಜೊತೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರಂತೆ ಉಡುಪಿ, ದಕ್ಷಿಣಕನ್ನಡ, ಚಾಮರಾಜನಗರ, ಮೈಸೂರು, ಹಾಸನ, ಚಿಕ್ಕಮಗಳೂರು, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.