ಸಿನಿಮಾಗಳಿಂದ ಜನರು ಹಾಗೂ ಜನರಿಂದ ಸಿನಿಮಾಗಳು ಸ್ಪೂರ್ತಿ ಪಡೆಯುವುದು ಎರಡೂ ಸಾಮಾನ್ಯ ಸಂಗತಿಗಳೇ. ಬೆಂಗಳೂರಿನ ಕುಟುಂಬವೊಂದು ಮಲೆಯಾಳಂ ಬ್ಲಾಕ್ ಬಸ್ಟರ್ ’ದೃಶ್ಯಂ’ ಚಿತ್ರದಿಂದ ಪ್ರೇರಣೆ ಪಡೆದು ಐಷಾರಾಮಿ ಜೀವನ ನಡೆಸಲು ಹೋಗಿ ವಂಚನೆಗೆ ಮುಂದಾಗಿ ಕೈ ಸುಟ್ಟುಕೊಂಡಿದೆ.
ನೀವು ’ದೃಶ್ಯಂ’ ನೋಡಿಲ್ಲವಾದಲ್ಲಿ: ಆ ಕಥೆಯಲ್ಲಿ ಬರುವ ಕುಟುಂಬದ ಪ್ರತಿಯೊಬ್ಬರೂ ಅದೇ ಕಥೆಯನ್ನು ಹೇಳುವ ಮೂಲಕ ಸುಳ್ಳನ್ನು ಕೇಳುವವರು ಅದೇ ನಿಜ ಎಂದುಕೊಳ್ಳುವಂತೆ ಮಾಡುತ್ತಾರೆ. ಹೀಗೆ ಮಾಡಿಕೊಂಡು ಕುಟುಂಬ ಅಪರಾಧ ಮಾಡಿಯೂ ತಪ್ಪಿಸಿಕೊಳ್ಳುತ್ತದೆ. ಅನೇಕಲ್‌ನಲ್ಲಿರುವ ಕುಟುಂಬ ಹಾಗೂ ಅದರ ಇಬ್ಬರು ನಿಕಟವರ್ತಿಗಳು ಇದನ್ನೇ ಮಾಡಿದ್ದಾರೆ. ಮೊದಲ ಯತ್ನದಲ್ಲಿ ತಪ್ಪಿಸಿಕೊಂಡ ಇಬ್ಬರು ಎರಡನೇ ಬಾರಿಗೆ ಸಿಕ್ಕಿ ಹಾಕಿಕೊಂಡಿದ್ದಾರೆ.
ಪತಿ ಬಿಟ್ಟು ಪ್ರಿಯಕರನ ಜೊತೆಗಿದ್ದ ಮಹಿಳೆ ಸಾವು, ವಿಷ ಸೇವಿಸಿದ ಪ್ರಿಯಕರನ ವಿರುದ್ಧ ಪೋಷಕರ ಗಂಭೀರ ಆರೋಪ
ಕುಟುಂಬದ ಮುಖ್ಯಸ್ಥ, 55-ವರ್ಷದ ರವಿಪ್ರಕಾಶ್ ಈ ಪ್ಲಾನ್‌ನ ನೇತೃತ್ವ ವಹಿಸಿದ್ದಾನೆ. ಆತನ 30 ವರ್ಷ ವಯಸ್ಸಿನ ಮಗ ಮಿಥುನ್ ಕುಮಾರ್, ಸೊಸೆ ಸಂಗೀತಾ, ಮಗಳು ಆಶಾ ಮತ್ತು ಅಳಿಯ ನಲ್ಲು ಚರಣ್ ಮಾಸ್ಟರ್ ಪ್ಲಾನ್ ಒಂದನ್ನು ಮಾಡಲು ಮುಂದಾಗಿದ್ದಾರೆ. ಮಿಥುನ್ ಕುಮಾರನ ಚಾಲಕ ದೀಪಕ್ ಮತ್ತು ಸ್ನೇಹಿತೆ ಆಸ್ಮಾ ಈ ಯೋಜನೆಯಲ್ಲಿ ಭಾಗಿಯಾಗಿದ್ದಾರೆ.
ದೃಶ್ಯಂ ಸಿನಿಮಾದಿಂದ ಪ್ರೇರಣೆ ಪಡೆದ ಈ ಗ್ಯಾಂಗ್, ಮನೆಯಲ್ಲಿದ್ದ ಚಿನ್ನವನ್ನೆಲ್ಲಾ ತೆಗೆದುಕೊಂಡು ಯಶವಂತಪುರದ ವರ್ತಕರೊಬ್ಬರ ಬಳಿ ಗಿರವಿ ಇಟ್ಟಿದ್ದಾರೆ. ಇದಾದ ಕೂಡಲೇ ಚಿನ್ನವನ್ನು ಯಾರೋ ಕದ್ದಿದ್ದಾರೆಂದು ಹೋಗಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇವರ ಈ ಪ್ಲಾನ್ ಬಗ್ಗೆ ಅರಿವಿಲ್ಲದ ಪೊಲೀಸರು ಪ್ರಕರಣ ಭೇದಿಸಲು ಎಲ್ಲೆಡೆ ಶೋಧ ನಡೆಸಿದ್ದಾರೆ. ಈ ಮೂಲಕ ಕುಟುಂಬಕ್ಕೆ ತನ್ನ ಚಿನ್ನ ಮರಳಿ ಬಂದಿದ್ದು, ಬ್ರೋಕರ್ ಮೂಲಕ ಬಂದಿದ್ದ ದುಡ್ಡು ಸಹ ಉಳಿದುಕೊಂಡಿದೆ.
ಈ ಪ್ಲಾನ್‌ನಿಂದ ಭಾರೀ ಪ್ರೇರಿತರಾದ ಕುಟುಂಬ ಇನ್ನೊಮ್ಮೆ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡು ಕಣಕ್ಕಿಳಿದಿದೆ. ಈ ಬಾರಿ ಎಲ್ಲ ಸೇರಿಕೊಂಡು 1,250 ಗ್ರಾಂ ಚಿನ್ನ ತೆಗೆದುಕೊಂಡು ಅದನ್ನು ತೆಗೆದುಕೊಂಡು ಹೋಗಿ ಚೂರು ಚೂರಾಗಿ ಬೇರೆ ಬೇರೆ ವರ್ತಕರ ಬಳಿ ಗಿರವಿ ಇಡಲು ತಿಳಿಸಿದ್ದಾರೆ. ಒಂದು ವೇಳೆ ಬಂಧನಕ್ಕೊಳಗಾದರೆ ಬೇಲ್ ಕೊಡಿಸಿ, ಸ್ವಲ್ಪ ದುಡ್ಡು ಕೊಡುವುದಾಗಿಯೂ ದೀಪಕ್‌ಗೆ ಮಾತು ಕೊಟ್ಟಿದ್ದಾರೆ. ಇದಕ್ಕೆ ಒಪ್ಪಿದ ದೀಪಕ್ ಕುಟುಂಬದ ಐಡಿಯಾದಲ್ಲಿ ಭಾಗಿಯಾಗಿದ್ದಾನೆ.
ಶಾಪಿಂಗ್ ಮಾಡಲೆಂದು ಬಟ್ಟೆಯಂಗಡಿಗೆ ಹೋಗಿದ್ದಾಗ ತನ್ನ ಬ್ಯಾಗ್ ಕಳುವಾಗಿದೆ ಎಂದು ಸೆಪ್ಟೆಂಬರ್ 19, 2021ರಂದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಆಶಾ ದೂರು ದಾಖಲಿಸಿದ್ದಾರೆ. ಬ್ಯಾಗಿನಲ್ಲಿ 30,000 ರೂ. ನಗದು, ಮೊಬೈಲ್ ಫೋನ್ ಹಾಗೂ 1,250 ಗ್ರಾಂ ಚಿನ್ನವಿದ್ದಿದ್ದಾಗಿ ಪೊಲೀಸರಿಗೆ ಹೇಳಿಕೊಂಡಿದ್ದಾಳೆ ಆಶಾ. ಬಟ್ಟೆಯಂಗಡಿಗೆ ಪ್ರವೇಶಿಸಿದ ವ್ಯಕ್ತಿಯೊಬ್ಬ ತನ್ನ ಬ್ಯಾಗ್ ಕಸಿದುಕೊಂಡಿದ್ದಾಗಿ ಆಶಾ ಹೇಳಿದ್ದಾಳೆ. ಪೊಲೀಸರು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರೀಶೀಲಿಸಿದ್ದು, ದೀಪಕ್‌ನನ್ನು ಡಿಸೆಂಬರ್‌ನಲ್ಲಿ ಬಂಧಿಸಿದ್ದಾರೆ. ಆಗಲೇ ನೋಡಿ ನಾಟಕ ಶುರುವಾಗಿದ್ದು.
ಪ್ರತಿಯೊಂದು ನಿಮಿಷದ ವಿವರವನ್ನೂ ಕಣ್ಣಾರೆ ಕಂಡಂತೆ ಕುಟುಂಬದ ಸದಸ್ಯರು ವಿವರಿಸುತ್ತಾ ಸಾಗಿದ್ದಾರೆ. ತನಿಖೆ ವೇಳೆ ದೀಪಕ್ ತಾನು ಚಿನ್ನ ಗಿರವಿ ಇಟ್ಟ ವರ್ತಕರ ಸ್ಥಳಗಳ ಮಾಹಿತಿ ಕೊಡುತ್ತಾ ಸಾಗಿದ್ದಾನೆ. ಪೊಲೀಸರು 500 ಗ್ರಾಂನಷ್ಟು ಚಿನ್ನವನ್ನು ಮರಳಿ ಪಡೆಯಲು ಸಫಲರಾಗಿದ್ದಾರೆ. ಆದರೆ ಒಡವೆ ನೋಡುತ್ತಲೇ ಪೊಲೀಸರಿಗೆ ಅನುಮಾನ ಬಂದಿದೆ. ಚಿನ್ನಾಭರಣಗಳು ತಮ್ಮದೆಂದು ಕುಟುಂಬ ಗುರುತು ಹಿಡಿಯುತ್ತಲೇ, ಈ ಆಭರಣಗಳು ಬೇರೆ ವಿನ್ಯಾಸಗಳನ್ನು ಹೊಂದಿರುವುದು ಕಂಡು ಬಂದಿದೆ.
ಇದರ ಬೆನ್ನಿಗೇ ದೀಪಕ್‌ಗೆ ಚೆನ್ನಾಗಿ ರುಬ್ಬಿದ ಪೊಲೀಸರು, ಸತ್ಯ ಬಾಯಿ ಬಿಡಿಸಿದ್ದಾರೆ. ಈ ತಂಡದಲ್ಲಿದ್ದ ಎಲ್ಲಾ ಆರು ಸದಸ್ಯರೂ ಈಗ ಜೈಲಿನಲ್ಲಿದ್ದಾರೆ.