ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ದುರಂತ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿಯೇ ಅತಿ ಹೆಚ್ಚು ಜನರು ವಿದ್ಯುತ್ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
2022ರಿಂದ 2024ರ ಈವರೆಗೂ ರಾಜ್ಯದಲ್ಲಿ ಒಟ್ಟು 290 ಜನರು ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ 42 ಜನರು ಬೆಂಗಳೂರಿನಲ್ಲಿ ಸಾವನ್ನಪ್ಪಿದವರಾಗಿದ್ದಾರೆ. 38 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನಲ್ಲಿ ಬಿಡಾಡಿ ದನಗಳ ಸಂಖ್ಯೆಯೂ ಹೆಚ್ಚುತ್ತಿದ್ದು, 166 ಜಾನುವಾರುಗಳು ಸಾವನ್ನಪ್ಪಿವೆ. ಈ ದುರಂತಗಳಿಗೆ ಕಾರಣ ವಿದ್ಯುತ್ ಮಾರ್ಗಗಳ ಕೆಳಗೆ ಮನೆಗಳ ನಿರ್ಮಾಣ. ವಿದ್ಯುತ್ ಕೇಬಲ್ ಗಳು ಹಾದು ಹೋಗುವ 7,722 ಕಡೆಗಳಲ್ಲಿ ಕಟ್ಟಡಗಳು ಇವೆ. ಈ ಕಟ್ಟಡಗಳ ಬಗ್ಗೆ ಬೆಸ್ಕಾಂ ಈವರೆಗೆ ಕ್ರಮಕ್ಕೆ ಮುಂದಾಗಿಲ್ಲ.
ಎರಡು ವರ್ಷಗಳಲ್ಲಿ ವಿದ್ಯುತ್ ಅವಘಡಕ್ಕೆ ಬೆಂಗಳೂರು ನಗರದಲ್ಲಿ ಸಾವನ್ನಪ್ಪಿದ 42 ಜನರ ಪೈಕಿ ಕೇವಲ 7 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ತಿಳಿದುಬಂದಿದೆ. ನಗರಗಳ ತುಂಬೆಲ್ಲ ವಿದ್ಯುತ್ ಕೇಬಲ್ ಗಳು ಹೆಚ್ಚಿವೆ. ಮಳೆಗಾಲದ ಸಂದರ್ಭದಲ್ಲಿ ಅವಘಡಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಜೊತೆಗೆ ಸಾರ್ವಜನಿಕರೂ ಜಾಗೃತೆವಹಿಸುವ ಅಗತ್ಯವಿದೆ.