ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಸಮಿತಿ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿ ರಚಿಸಲು ಹೇಳಿದ್ದೇನೆ. ಕುಡಿಯುವ ನೀರನ್ನು ಕುಡಿಯಲು ಮಾತ್ರ ಉಪಯೋಗಿಸಬೇಕು. ಕುಡಿಯುವ ನೀರು ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಒಟ್ಟಾರೆ 500 ಎಂಎಲ್ ಡಿ ನೀರಿನ ಕೊರತೆ ಇದೆ. ಬೆಂಗಳೂರಿನಲ್ಲಿ 1470 ಎಂಎಲ್ ಡಿ ನೀರು ಮಾತ್ರ ಕಾವೇರಿ ನೀರಿನಿಂದ ಬರುತ್ತಿದೆ. ಉಳಿದದ್ದು ಬೋರ್ ವೆಲ್ ಮೂಲಕ 14 ಸಾವಿರ ಬೋರ್ ವೆಲ್ ಇದೆ. ಅದರಲ್ಲಿ 6 ಬೋರ್ ವೆಲ್ ಡ್ರೈ ಆಗಿದೆ ಎಂದು ಹೇಳಿದರು.
2600 ಎಂ ಎಲ್ ಡಿ ನೀರು ಬೆಂಗಳೂರಿಗೆ ಬೇಕು. ಆದರೆ ಬೆಂಗಳೂರಿನಲ್ಲಿ ಸದ್ಯ 1470 ಎಂಎಲ್ ಡಿ ನೀರು ಮಾತ್ರ ಬರುತ್ತಿದೆ. ಅದಕ್ಕಿಂತ ಹೆಚ್ಚು ನೀರು ಪಂಪ್ ಮಾಡಲು ಆಗುವುದಿಲ್ಲ. ಕಳೆದ ಬಾರಿಯೂ ಇಷ್ಟೇ ನೀರು ಬರುತ್ತಿತ್ತು ಎಂದರು.
110 ಹಳ್ಳಿಗಳಲ್ಲಿ 51 ಹಳ್ಳಿಗಳಿಗೆ ತೀವ್ರ ತೊಂದರೆ ಇದೆ. ಜೂನ್ ಒಳಗಡೆ 5ನೇ ಹಂತ ಪೂರ್ಣಗೊಳ್ಳಲಿದೆ. ಆಗ 750 ಎಂಎಲ್ ಡಿ ನೀರು ಸಿಗುತ್ತದೆ. ಹಾಗಾಗಿ ತೊಂದರೆ ಆಗಲ್ಲ ಎಂದರು. ಬೆಂಗಳೂರಿನಲ್ಲಿ ಹೊಸ ಬೋರ್ ವೆಲ್ ಹಾಕಿಸಲು ಸೂಚಿಸಿದಂತೆ ಈಗಾಗಲೇ 315 ಬೋರ್ ವೆಲ್ ಕೊರೆಯಲಾಗಿದೆ. 1013 ಬೋರ್ ವೆಲ್ ರೀಚಾರ್ಜ್ ಮಾಡಲಾಗುತ್ತಿದೆ. ಕೊಳಗೇರಿ ಹಾಗೂ 110 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದರು.