ಇದು ರಾಜ್ಯ ರಾಜಧಾನಿಯಲ್ಲಿ ನಡೆದಿರೋ ಘಟನೆ. ಕಲಬುರಗಿಯ ವೈದ್ಯರೊಬ್ಬರ ಮಗನಿಗೆ ಎಂಬಿಬಿಎಸ್ ಸೀಟು ಕೊಡಿಸೋದಾಗಿ ಹೇಳಿ ಖದೀಮರು 1.6 ಕೋಟಿ ರೂಪಾಯಿಯನ್ನ ವಂಚಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಕಲಬುರಗಿಯ ಡಾ. ಶಂಕರ್, ಮಗನಿಗೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸೊ ಪ್ರಯತ್ನ ಮಾಡುತ್ತಿದ್ದರು. ಎಷ್ಟು ಪ್ರಯತ್ನ ಪಟ್ಟರೂ ಯಾವುದೂ ಕಾಲೇಜಿನಲ್ಲಿ ಸೀಟು ಸಿಗೋ ಲಕ್ಷಣವೇ ಕಾಣಿಸ್ತಿರಲಿಲ್ಲ. ಈ ವೇಳೆ 8 ವರ್ಷದಿಂದ ಪರಿಚಯಸ್ಥರಾದ ಆರೋಪಿ ನಾಗರಾಜ್, ಡಾ. ಶಂಕರ್ ಅವರಿಗೆ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ನಿಮ್ಮ ಮಗನಿಗೆ ಸೀಟು ಕೊಡಿಸುತ್ತೇನೆ. ಅಲ್ಲಿ ನನಗೆ ಪರಿಚಯದವರು ಇದ್ದಾರೆ ಅಂತ ಓಳು ಬಿಟ್ಟಿದ್ದಾನೆ. ಹಳೆ ಪರಿಚಯ ಆದ್ದರಿಂದ ಡಾ. ಶಂಕರ್ ಅವರು 66 ಲಕ್ಷವನ್ನ ಕಂತಿನಲ್ಲಿ ಕೊಟ್ಟಿದ್ದಾರೆ. ಆದರೂ ಡಾ. ಶಂಕರ್ ಅವರ ಮಗ ಎಂಬಿಬಿಎಸ್ ಸೀಟು ಸಿಗದೇ ಪರದಾಡುತ್ತಲೇ ಇದ್ದ.
ಕೆಲ ದಿನಗಳ ನಂತರ ಡಾ. ಶಂಕರ್ ಅವರನ್ನ ಬೆಂಗಳೂರಿಗೆ ಕರೆಸಿಕೊಂಡ ಆರೋಪಿ ನಾಗರಾಜ್, ಮಸಲತ್ತು ಮಾಡಿ, ಹನಿಟ್ರ್ಯಾಪ್ ಮಾಡಿ ಹಣ ವಾಪಸ್ ನೀಡದೇ ಮತ್ತೆ 50 ಲಕ್ಷವನ್ನ ಪೀಕಿಸಿಕೊಂಡಿದ್ದಾನೆ. ಒಟ್ಟಿನಲ್ಲಿ 1.6 ಕೋಟಿಯನ್ನ ಡಾ.ಶಂಕರ್ ಬಾಬುರಾವ್ ಅವರಿಂದ ನಾಗರಾಜ್ ದೋಚಿದ್ದಾನೆ ಅನ್ನೊ ಆರೋಪವಿದೆ. ಈಗಾಗಲೇ ಡಾ. ಶಂಕರ್ ಬಾಬುರಾವ್ ಅವರು ನಾಗರಾಜ್ ಹಾಗೂ ಮಧು ಸೇರಿದಂತೆ ಮೂವರ ಮೇಲೆ ಕೇಸ್ ಹಾಕಿದ್ದಾರೆ.
BIG BREAKING: 7 ಯೋಧರು ಹುತಾತ್ಮ: ನದಿಗೆ ಸೇನಾ ವಾಹನ ಬಿದ್ದು ದುರಂತ
ಆರೋಪಿ ನಾಗರಾಜ್ ಸೇಮ್ ಟು ಸೇಮ್ ಸಿನೆಮಾ ಸೀನ್ ಕ್ರಿಯೇಟ್ ಮಾಡಿದ್ದಾರೆ. ಆರೋಪಿ ನಾಗರಾಜ್ ಬೆಂಗಳೂರಿನ ಗಾಂಧಿನಗರದ ಲಾಡ್ಜ್ ನಲ್ಲಿ ಪ್ರತ್ಯೇಕ ರೂಮ್ ಬುಕ್ ಮಾಡಿಟ್ಟಿದ್ದಾನೆ. ಮಧ್ಯರಾತ್ರಿ ಆರೋಪಿ ನಾಗರಾಜ್, ಅಣತಿಯಂತೆ ಇಬ್ಬರು ಯುವತಿಯರು ಶಂಕರ್ ಉಳಿದುಕೊಂಡಿದ್ದ ರೂಮಿಗೆ ನುಗ್ಗಿದ್ದಾರೆ. ಬಳಿಕ ಆತನ ಪಕ್ಕದಲ್ಲಿ ಕುಳಿತುಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ನಕಲಿ ಪೊಲೀಸರು ರೂಮ್ಗೆ ಎಂಟ್ರಿ ಕೊಟ್ಟಿದ್ದಾರೆ. ವೇಶ್ಯಾವಾಟಿಕೆ ಜಾಲ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು ರೈಡ್ ಮಾಡಲಾಗಿದೆ ಎಂದಿದ್ದಾರೆ. ಪಕ್ಕದ ರೂಮಿನಲ್ಲಿ ವಾಸ್ತವ್ಯ ಹೂಡಿದ್ದ ನಾಗರಾಜ್, ಹುಡುಗಿಯರು ಇರುವ ಶಂಕರ್ ಪೋಟೊವನ್ನು ಕ್ಲಿಕಿಸಿಕೊಂಡಿದ್ದಾನೆ.
ಮೊದಲು 50 ಲಕ್ಷ ರೂಪಾಯಿ ಪಡೆದು ಆರೋಪಿಗಳು ಕೆಲ ದಿನಗಳು ಸುಮ್ಮನಿದ್ದಾರೆ. ಬಳಿಕ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾರೆ. ದಾಳಿ ವೇಳೆ ಬಂಧಿತರಾಗಿರುವ ಯುವತಿಯರಿಗೆ ಬೇಲ್ ಕೊಡಿಸಲು 20 ಲಕ್ಷ ರೂಪಾಯಿ ಹಣ ಕೊಡುವಂತೆ ತಾಕೀತು ಮಾಡಿದ್ದಾರೆ. ಹಣ ನೀಡದಿದ್ದರೆ ಯುವತಿಯರ ಸಮೇತ ನಿನ್ನ ಮನೆಗೆ ಬಂದು ಮಾನಮಾರ್ಯಾದೆ ಹರಾಜು ಹಾಕುವೆ ಎಂದು ವಂಚಕರು ಬೆದರಿಸಿದ್ದಾರೆ. ಇದರಿಂದ ಕಂಗಾಲಾದ ಶಂಕರ್ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ್ದ ಪೊಲೀಸರು ಪ್ರಕರಣವನ್ನ ಸಿಸಿಬಿ ಹಸ್ತಾಂತರಿಸಿದ್ದರು. ಇದೀಗ ಮೂವರನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಹೆಚ್ಚಿನ ತನಿಖೆ ನಡೆಸುತ್ತಿದೆ.