ಬೆಂಗಳೂರು: ಬೆಂಗಳೂರಿನಲ್ಲಿ ಪೊಲೀಸರ ಹೆಸರಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ಮಂಜುನಾಥ ನಗರದ ಮೋದಿ ಸೇತುವೆ ಬಳಿ ಘಟನೆ ನಡೆದಿದೆ.
ರಾತ್ರಿ ವೇಳೆ ಟೀ, ಕಾಫಿ ಮಾರುವ ಅರ್ಜುನ್ ಗೆ ಪೋಲಿಸ್ ಹೆಲ್ಮೆಟ್ ಧರಿಸಿ ಬಂದಿದ್ದ ನಿತೇಶ್ ಎಂಬಾತ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅರ್ಜುನ್ ಬಳಿ ಬಂದು ಗುಟ್ಕಾ, ಸಿಗರೇಟ್ ಪಡೆದಿದ್ದ ಆರೋಪಿ ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದು, ಇದೇ ವೇಳೆ ಅರ್ಜುನ್ ಬಳಿಗೆ ಕರ್ತವ್ಯ ನಿರತ ಪೊಲೀಸರು ಬಂದಿದ್ದಾರೆ. ಅಸಲಿ ಪೊಲೀಸರನ್ನು ಕಂಡ ನಿತೇಶ್ ಪರಾರಿಯಾಗಿದ್ದಾನೆ.
ಸ್ಥಳೀಯರ ಬಳಿ ವಿಚಾರಿಸಿದಾಗ ನಿತೇಶ್ ಕೃತ್ಯವೆಸಗಿದ್ದಾನೆ ಎಂಬುದು ಪತ್ತೆಯಾಗಿದೆ. ಮೇ 17ರಂದು ಮಧ್ಯರಾತ್ರಿ ಮೋದಿ ಸೇತುವೆ ಬಳಿ ಘಟನೆ ನಡೆದಿದ್ದು, ಅರ್ಜುನ್ ಬಸವೇಶ್ವರನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.