ಬೆಂಗಳೂರು: ತಡರಾತ್ರಿವರೆಗೂ ಬೆಂಗಳೂರು ನಗರ ಪ್ರದಕ್ಷಿಣೆ ನಡೆಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಸ್ತೆ ಗುಂಡಿ ದುರಸ್ತಿ ಕಾರ್ಯ ಪರಿಶೀಲನೆ ನಡೆಸಿದ್ದಾರೆ.
ಹಾರೆಯಿಂದ ಅಗೆದು ಗುಂಡಿ ಪರಿಶೀಲನೆ ನಡೆಸಿದ ಡಿಸಿಎಂ ಗುಣಮಟ್ಟ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಂಜಿ ರಸ್ತೆ, ಹಳೆ ಮದ್ರಾಸ್ ರಸ್ತೆ, ಇಂದಿರಾ ನಗರ, ದೊಮ್ಮಲೂರು ಫ್ಲೈ ಓವರ್ ನಲ್ಲಿ ಡಾಂಬರೀಕರಣ ಕಾಮಗಾರಿ ಪರಿಶೀಲಿಸಿದ್ದಾರೆ.
ನೀಲಸಂದ್ರ ಸರ್ಕಲ್ ಬಳಿ ರಸ್ತೆಗಳ ಗುಣಮಟ್ಟ ಪರಿಶೀಲನೆ ನಡೆಸಿದ ಡಿಸಿಎಂ ಹಾರೆಯಿಂದ ಅಗೆದು ಗುಣಮಟ್ಟ ಪರಿಶೀಲನೆ ನಡೆಸಿದ್ದಾರೆ. ರಿಚ್ಮಂಡ್ ರಸ್ತೆ, ಲಾಲ್ಬಾಗ್ ವೆಸ್ಟ್ ಗೇಟ್ ರಸ್ತೆ, ಸೌತ್ ಎಂಡ್ ಸರ್ಕಲ್, ಜಯನಗರ ರಸ್ತೆ ಕಾಮಗಾರಿ, ಬನಶಂಕರಿ ಮೆಟ್ರೋ ಕೆಳಗಿರುವ ರಸ್ತೆ ಪರಿಶೀಲನೆ ನಡೆಸಿದ್ದಾರೆ. ಮೆಟ್ರೋ ಕೆಳಗಿನ ತರಕಾರಿ ಗಾಡಿ ನೋಡಿ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಿದ್ದಾರೆ. ತಡರಾತ್ರಿ 2:15ರವರೆಗೂ ರಸ್ತೆ ಕಾಮಗಾರಿ ಪರಿಶೀಲಿಸಿದ ಡಿಸಿಎಂ ಮನೆಗೆ ತೆರಳಿದ್ದಾರೆ.
ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ, ಬೆಂಗಳೂರು ನಗರದ ಜೆಸಿ ರಸ್ತೆ, ಟ್ರಿನಿಟಿ ಜಂಕ್ಷನ್ ಹಾಗೂ ದೊಮ್ಮಲೂರು ಬ್ರಿಡ್ಜ್ ಬಳಿ ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದೆ. ಅಧಿಕಾರಿಗಳು ನೀಡಿದ ಮಾಹಿತಿ ಕೇಳಿ ಕೂರುವವನು ನಾನಲ್ಲ. ಕಾಮಗಾರಿಯ ಗುಣಮಟ್ಟವನ್ನು ಕಣ್ಣಾರೆ ನೋಡಿ ಪರಿಶೀಲಿಸುವುದು ಈ ಭೇಟಿಯ ಉದ್ದೇಶವಾಗಿದೆ. ಜಾಗತಿಕ ನಗರವಾಗಿ ಗುರುತಿಸಿಕೊಂಡಿರುವ ಬೆಂಗಳೂರಿನ ಘನತೆಗೆ ಚ್ಯುತಿ ಬರದಂತೆ ಕಾಪಾಡುವುದೇ ನಮ್ಮ ಧ್ಯೇಯ ಎಂದು ತಿಳಿಸಿದ್ದಾರೆ.